ಕಳೆದೆರಡು ವರ್ಷಗಳಲ್ಲಿ ಹುಲಿ, ಆನೆ ದಾಳಿಗಳಿಗೆ ಬಲಿಯಾದವರೆಷ್ಟು ಮಂದಿ ಗೊತ್ತೇ?

ಹೊಸದಿಲ್ಲಿ, ಮಾ.14: ಕಳೆದ ಎರಡು ವರ್ಷಗಳಲ್ಲಿ ಹಲವಾರು ರಾಜ್ಯಗಳಲ್ಲಿ ಹುಲಿಗಳು ಮತ್ತು ಆನೆಗಳ ದಾಳಿಗಳಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಹುಲಿಗಳ ದಾಳಿಗಳಿಂದ 163 ಮತ್ತು ಆನೆಗಳ ದಾಳಿಗಳಿಂದ 995 ಸೇರಿದಂತೆ ಈ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 1,158 ಜನರು ಜೀವಗಳನ್ನು ಕಳೆದುಕೊಂಡಿದ್ದಾರೆ.
ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಸಹಾಯಕ ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಜನರ ಸಾವುಗಳಿಗೆ ಕಾರಣವಾಗಿರುವ ಮಾನವ-ವನ್ಯಜೀವಿ ಸಂಘರ್ಷದ ಕುರಿತು ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕಳೆದೆರಡು ವರ್ಷಗಳಲ್ಲಿ,ಅಂದರೆ 2021 ಮತ್ತು 2022ರಲ್ಲಿ ಹುಲಿಗಳ ದಾಳಿಗಳಿಂದ ಅತ್ಯಂತ ಹೆಚ್ಚಿನ ಸಾವುಗಳು (116) ಮಹಾರಾಷ್ಟ್ರದಲ್ಲಿ ಸಂಭವಿಸಿದ್ದರೆ,ಉತ್ತರ ಪ್ರದೇಶ (25),ಪಶ್ಚಿಮ ಬಂಗಾಳ (6),ಬಿಹಾರ (6),ಉತ್ತರಾಖಂಡ (5) ಮತ್ತು ತಮಿಳುನಾಡು (3) ನಂತದ ಸ್ಥಾನಗಳಲ್ಲಿವೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಇಬ್ಬರು ಮತ್ತು ಮಧ್ಯಪ್ರದೇಶದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
2021ರಲ್ಲಿ ಹುಲಿಗಳ ದಾಳಿಗಳಿಂದ ಮಹಾರಾಷ್ಟ್ರದಲ್ಲಿ 32 ಜನರು ಸಾವನ್ನಪ್ಪಿದ್ದರೆ 2022ರಲ್ಲಿ ಈ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. 2021ರಲ್ಲಿ ಉ.ಪ್ರದೇಶದಲ್ಲಿ 11 ಸಾವುಗಳು ಸಂಭವಿಸಿದ್ದರೆ 2022ರಲ್ಲಿ ಇದು 14ಕ್ಕೆ ಹೆಚ್ಚಿದೆ. ಉತ್ತರಾಖಂಡದಲ್ಲಿ ಇದೇ ಅವಧಿಯಲ್ಲಿ ಸಾವುಗಳ ಸಂಖ್ಯೆ ಒಂದರಿಂದ ಮೂರಕ್ಕೆ ಏರಿಕೆಯಾಗಿದೆ.
ಆದರೆ ಇತರ ರಾಜ್ಯಗಳಲ್ಲಿ ಹುಲಿ ದಾಳಿಗಳಿಂದ ಸಾವುಗಳಲ್ಲಿ ಇಳಿಕೆಯ ಪ್ರವೃತ್ತಿ ಕಂಡುಬಂದಿದೆ. ತಮಿಳುನಾಡಿನಲ್ಲಿ 2021ರಲ್ಲಿ ಮೂರು ಸಾವುಗಳು ಸಂಭವಿಸಿದ್ದರೆ 2022ರಲ್ಲಿ ಇದು ಶೂನ್ಯಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಬಿಹಾರದಲ್ಲಿ ಸಾವುಗಳ ಸಂಖ್ಯೆ ನಾಲ್ಕರಿಂದ ಎರಡಕ್ಕೆ ತಗ್ಗಿದೆ.
ಹುಲಿಗಳಲ್ಲದೆ,ಆನೆಗಳೂ ಹಲವರ ಸಾವುಗಳಿಗೆ ಕಾರಣವಾಗಿವೆ. ಕಳೆದೆರಡು ವರ್ಷಗಳಲ್ಲಿ ಜಾರ್ಖಂಡ್ನಲ್ಲಿ ಅತ್ಯಂತ ಹೆಚ್ಚಿನ ಸಾವುಗಳು (217) ಸಂಭವಿಸಿದ್ದರೆ,ಒಡಿಶಾ (205),ಅಸ್ಸಾಂ (154),ಪ.ಬಂಗಾಳ (124),ಛತ್ತೀಸ್ಗಡ (106),ತಮಿಳುನಾಡು (94),ಕೇರಳ (45),ಕರ್ನಾಟಕ (40),ಮೇಘಾಲಯ (8),ತ್ರಿಪುರಾ (3),ಅರುಣಾಚಲ ಪ್ರದೇಶ (2) ಮತ್ತು ಉ.ಪ್ರದೇಶ (1) ನಂತರದ ಸ್ಥಾನಗಳಲ್ಲಿವೆ.
ಛತ್ತೀಸ್ಗಡ,ಜಾರ್ಖಂಡ್,ಕೇರಳ,ಒಡಿಶಾ ಮತ್ತು ಪ.ಬಂಗಾಳಗಳಲ್ಲಿ ಆನೆಗಳ ದಾಳಿಗಳಿಂದ ಜನರ ಸಾವುಗಳ ಪ್ರಕರಣಗಳು ಇಳಿಕೆ ಪ್ರವೃತ್ತಿಯನ್ನು ದಾಖಲಿಸಿವೆ.
ಸಚಿವಾಲಯವು ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ವನ್ಯಜೀವಿ ನಿರ್ವಹಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸುವುದಕ್ಕೆ ಸಂಬಂಧಿತ ಚಟುವಟಿಕೆಗಳಿಗಾಗಿ ಹಣಕಾಸನ್ನು ಒದಗಿಸಿದೆ.
ಆದರೆ ಸಚಿವಾಲಯವು ಸೋಲಾರ್ ವಿದ್ಯುತ್ ಬೇಲಿಗಳ ಸ್ಥಾಪನೆ ಮತ್ತು ನಿರ್ವಹಣೆ ಸೇರಿದಂತೆ ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸುವ ಚಟುವಟಿಕೆಗಳಿಗಾಗಿ ಮತ್ತು ವನ್ಯಜೀವಿ ಆವಾಸಸ್ಥಾನಗಳ ಅಭಿವೃದ್ಧಿಗಾಗಿ ಕೇರಳ ಸರಕಾರಕ್ಕೆ ಕೇವಲ 6.06 ಕೋ.ರೂ.ಗಳನ್ನು ಮಂಜೂರು ಮಾಡಿದೆ.







