ಎಲ್ಐಸಿ ದಕ್ಷಿಣ ಮಧ್ಯ ವಲಯ ಮ್ಯಾನೇಜರ್ ಆಗಿ ಎಲ್.ಕೆ. ಶಾಮಸುಂದರ್ ಅಧಿಕಾರ ಸ್ವೀಕಾರ

ಹೈದರಾಬಾದ್ : ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ದಕ್ಷಿಣ ಮಧ್ಯ ವಲಯದ ವಲಯ ಮ್ಯಾನೇಜರ್ (ರೆನಲ್ ಮ್ಯಾನೇಜರ್) ಆಗಿ ಎಲ್.ಕೆ. ಶಾಮಸುಂದರ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಅವರು ಈವರೆಗೆ ಹಿರಿಯ ವಿಭಾಗೀಯ ಮ್ಯಾನೇಜರ್ ಆಗಿ ಸಿಕಂದರಾಬಾದ್ ಮತ್ತು ಜೋರ್ಹತ್ ವಿಭಾಗಗಳನ್ನು ಮುನ್ನಡೆಸಿದ್ದಾರೆ. ವಲಯ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ, ಅವರು ಹೈದರಾಬಾದ್ನಲ್ಲಿರುವ ವಲಯ ತರಬೇತಿ ಕೇಂದ್ರದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ಮುಂಬೈಯಲ್ಲಿ ಕಾರ್ಪೊರೇಟ್ ಕಮ್ಯುನಿಕೇಶನ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರು ತನ್ನ 35 ವರ್ಷಗಳಿಗೂ ಹೆಚ್ಚಿನ ಅವಧಿಯ ಸೇವೆಯ ವೇಳೆ, ವಿವಿಧ ಮಾರುಕಟ್ಟೆ ಮತ್ತು ಆಡಳಿತ ಹುದ್ದೆಗಳನ್ನು ವಹಿಸಿದ್ದಾರೆ.
ಅವರು 2010ರಿಂದ 2013ರವರೆಗೆ ಬಹರೈನ್ನಲ್ಲಿ ಎಲ್ಐಸಿ (ಅಂತರ್ರಾಷ್ಟ್ರೀಯ) ಇದರ ಜನರಲ್ ಮ್ಯಾನೇಜರ್ ಆಗಿದ್ದು, ಅಂತರ್ರಾಷ್ಟ್ರೀಯ ವಿಮಾ ಮಾರುಕಟ್ಟೆ ಕ್ಷೇತ್ರದಲ್ಲೂ ಹೆಚ್ಚಿನ ಅನುಭವ ಹೊಂದಿದ್ದಾರೆ.
ಶಾಮಸುಂದರ್ ದಕ್ಷಿಣ ಮಧ್ಯ ವಲಯದಲ್ಲಿ ಪ್ರಾದೇಶಿಕ ಮ್ಯಾನೇಜರ್ (ಮಾರುಕಟ್ಟೆ) ಆಗಿ ಮಾರುಕಟ್ಟೆ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದ್ದರು ಎಂದು ಪ್ರಕಟನೆಯೊಂದು ತಿಳಿಸಿದೆ.







