ಹೊಸಬೆಟ್ಟುವಿನಲ್ಲಿ ನಿರ್ಮಾಣ ಮಾಡಲಿದ್ದ ಜಟ್ಟಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ವಿರೋಧ
ಸುರತ್ಕಲ್, ಮಾ.14: ಸಾಗರಮಾಲಾ ಯೋಜನೆಯಡಿ ಹೊಸಬೆಟ್ಟುವಿನಲ್ಲಿ ನಿರ್ಮಾಣ ಮಾಡಲಿದ್ದ ಜಟ್ಟಿ ನಿರ್ಮಾಣಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಕೆಲಸವನ್ನು ಬುಧವಾರದಿಂದ ಆರಂಭಿಸಲು ಸ್ಥಳ ಪರೀಶಲನೆಗೆ ಆಗಮಿಸಿದ್ದ ಎಂಎಂಪಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಹಿಂದೆ ಕಳುಹಿಸಿರುವ ಘಟನೆ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೊಸಬೆಟ್ಟು ಮೊಗವೀರ ಸಂಘದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈಗಾಗಲೇ ಈ ಯೋಜನೆಗೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಅದಕ್ಕೂ ಮುನ್ನ ಸಂಸದ ನಳಿನ್ ಕುಮಾರ್ ಕಟೀಲ್ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ವೇಳೆಯೂ ಗ್ರಾಮಸ್ಥರು ಪ್ರತಿರೋಧ ವ್ಯಕ್ತ ಪಡಿಸಿದ್ದರು ಹಾಗಾಗಿ ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಲಾಗಿತ್ತು. ಆ ಬಳಿಕ ಎನ್‌ಎಂಪಿಎ ಅಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನ ಪಡಿಸಿ ಬಳಿಕ ಎಂಎಂಪಿಎ ಕಚೇರಿಯಲ್ಲಿ ಸಭೆ ಆಯೋಜಿಸಿದ್ದರು.
ಆ ಸಭೆಯಲ್ಲಿ ಗ್ರಾಮಸ್ಥರ ಬೇಡಿಕೆಗಳಿಗೆ ಮನ್ನಣೆ ದೊರೆಯದಿದ್ದ ಕಾರಣ ಜಿಲ್ಲಾಧಿಕಾರಿಯವರ ಜೊತೆ ಸಭೆಯನ್ನು ಆಯೋಜಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈ ವರೆಗೂ ಜಿಲ್ಲಾಧಿಕಾರಿಯವರ ಜೊತೆ ಸಭೆ ನಡೆದಿಲ್ಲ. ಹಾಗಿದ್ರೂ ಅಧಿಕಾರಿಗಳು ಗ್ರಾಮಸ್ಥರ ಅಭಿಪ್ರಾಯವನ್ನು ಕೇಳದೆ, ನಮ್ಮ ನಿರ್ಧಾರಕ್ಕೆ ವಿರುದ್ಧವಾಗಿ ಕಾಮಗಾರಿ ಸಂಬಂಧ ಸರ್ವೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಮಗಾರಿ ಆರಂಭಿಸಲು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿಯವರು ಒತ್ತಡ ಹಾಕುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿದು ಎಂಎಂಪಿಎ ಅಧಿಕಾರಿಗಳು ಜಿಲ್ಲಾಧಿಕಾರಿಯವರ ಜೊತೆ ಸಭೆಯನ್ನೂ ಮಾಡಲು ಬಿಡದೆ ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ಈ ಹಿನ್ನೆಲೆಯಲ್ಲಿ ಬುಧವಾರ ಹೊಸಬೆಟ್ಟು ಮೊಗವೀರ ಮಹಾ ಸಭಾದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.







