ಮಹಿಳೆಯರ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಜಯ

ಬ್ರೆಬೋರ್ನ್, ಮಾ.14: ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕದ ಕೊಡುಗೆ(51 ರನ್, 30 ಎಸೆತ), ನ್ಯಾಟ್ ಸಿವೆರ್-ಬ್ರಂಟ್(3-21) ಹಾಗೂ ಹೇಲಿ ಮ್ಯಾಥ್ಯೂಸ್(3-23) ಅಮೋಘ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 55 ರನ್‌ನಿಂದ ಗೆಲುವು ದಾಖಲಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿದೆ.
ಗೆಲ್ಲಲು 163 ರನ್ ಗುರಿ ಬೆನ್ನಟ್ಟಿದ ಗುಜರಾತ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಹೀನಾಯವಾಗಿ ಸೋಲುಂಡಿತು. ಗುಜರಾತ್ ತಾನಾಡಿದ 5ನೇ ಪಂದ್ಯದಲ್ಲಿ 4ನೇ ಸೋಲು ಕಂಡಿತು. ಮುಂಬೈ ಸತತ 5ನೇ ಗೆಲುವು ದಾಖಲಿಸಿದೆ.
ಮುಂಬೈ ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್(0)ವಿಕೆಟನ್ನು ಕಳೆದುಕೊಂಡಿತು. ಆಗ ಜೊತೆಯಾದ ಯಸ್ತಿಕಾ ಭಾಟಿಯಾ(44 ರನ್, 37 ಎಸೆತ) ಹಾಗೂ ನ್ಯಾಟ್ ಸಿವೆರ್-ಬ್ರಂಟ್(36 ರನ್, 31 ಎಸೆತ)2ನೇ ವಿಕೆಟಿಗೆ 74 ರನ್ ಜೊತೆಯಾಟ ನಡೆಸಿದರು.
ನಾಯಕಿ ಹರ್ಮನ್‌ಪ್ರೀತ್(51 ರನ್, 30 ಎಸೆತ, 7 ಬೌಂಡರಿ, 2 ಸಿಕ್ಸರ್) ಅಮೆಲಿಯಾ ಕೆರ್ರ್ (19 ರನ್, 13 ಎಸೆತ)ಜೊತೆಗೆ 4ನೇ ವಿಕೆಟಿಗೆ 51 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 162ಕ್ಕೆ ತಲುಪಿಸಿದ್ದಾರೆ. ಗುಜರಾತ್ ಬೌಲಿಂಗ್ ವಿಭಾಗದಲ್ಲಿ ಅಶ್ಲೆ ಗಾರ್ಡನರ್(3-34)ಯಶಸ್ವಿ ಬೌಲರ್ ಎನಿಸಿಕೊಂಡರು.