ಮಾ.21ರಿಂದ 23 ಸಾವಿರ ಬಸ್ಗಳ ಸಂಚಾರ ಬಂದ್: ಎಚ್.ವಿ.ಅನಂತಸುಬ್ಬರಾವ್
ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ
ಬೆಂಗಳೂರು, ಮಾ.15: ಸಾರಿಗೆ ನೌಕರರ ವೇತನ ಹೆಚ್ಚಳ, ವಿವಿಧ ಭತ್ಯೆಗಳ ಹೆಚ್ಚಳ, ಸೇವೆಯಿಂದ ವಜಾಗೊಂಡಿರುವ ನೌಕರರ ಮರುನೇಮಕ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾ.21ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಮಹಾಮಂಡಳಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ನ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್, 'ಮಾ.21ರಂದು ಬೆಳಗ್ಗೆ 6ರಿಂದ 4 ನಿಗಮದ 23 ಸಾವಿರ ಬಸ್ಗಳು, 1 ಲಕ್ಷದ 25 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಹಿಂದಿನ ದಿನ ರಾತ್ರಿಯೇ 23 ಸಾವಿರ ಬಸ್ಗಳು ಡಿಪೋ ಒಳಗಡೆ ಇರಲಿದೆ. ಹೊರಗೆ ಬರಲ್ಲ' ಎಂದು ಮಾಹಿತಿ ನೀಡಿದರು.
ಮುಷ್ಕರದಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಪಾಲ್ಗೊಂಡು ರಾಜ್ಯ ಸರಕಾರ ಸಾರಿಗೆ ನೌಕರರಿಗೆ ಮಾಡುತ್ತಿರುವ ಮಲತಾಯಿ ಧೋರಣೆ ಹಾಗೂ ವಿಳಂಬ ನೀತಿಯನ್ನು ತೀವ್ರವಾಗಿ ಖಂಡಿಸಬೇಕು ಎಂದರು.
ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ನೌಕರರ ಬೇಡಿಕೆಗಳ ಪರವಾಗಿ ಆಶ್ವಾಸನೆ ಕೊಟ್ಟ ತಿಂಗಳುಗಳೆ ಕಳೆದಿವೆ. ಆದರೆ ಈವರೆಗೆ ಸರಕಾರದಿಂದ ಯಾವುದೆ ರೀತಿಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿಲ್ಲ. ಇನ್ನೊಂದು ತಿಂಗಳು ಕಳೆದರೆ ಸರಕಾರದ ಅವಧಿಯೂ ಪೂರ್ಣಗೊಳ್ಳುತ್ತದೆ. ಆಗ ನೌಕರರ ಗತಿಯೇನು ಎಂದು ಅವರು ಪ್ರಶ್ನಿಸಿದರು.
ಬೆಲೆ ಏರಿಕೆಯಿಂದ ನೌಕರರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಸರಕಾರ ನೌಕರರ ವೇತನ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಇದಕ್ಕಾಗಿ ನೌಕರರೆಲ್ಲರೂ ಮುಷ್ಕರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಒಕ್ಕೊರಲಿನಿಂದ ಒತ್ತಾಯಿಸಬೇಕು ಎಂದು ಅನಂತಸುಬ್ಬರಾವ್ ತಿಳಿಸಿದರು.