'ಇಂದಿರಾ ಗಾಂಧಿ' ಹೆಸರಿದೆ ಎಂದು ಕ್ಯಾಂಟೀನ್ ಗಳನ್ನು ಮುಚ್ಚಿದರೆ ಸರ್ಕಾರಕ್ಕೆ ಬಡವರ ಶಾಪ ತಟ್ಟಲಿದೆ: ಸಿದ್ದರಾಮಯ್ಯ

ಬೆಂಗಳೂರು: 'ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿದರೆ ಬಡವರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ, ಇಂದಿರಾ ಗಾಂಧಿ ಅವರ ಹೆಸರಿದೆ ಎಂಬ ಏಕೈಕ ಕಾರಣಕ್ಕೆ ಕ್ಯಾಂಟೀನ್ ಗಳನ್ನು ಮುಚ್ಚಿದರೆ ಬಡವರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಸಿದ್ದರಾಮಯ್ಯ, 'ನಮ್ಮ ಸರ್ಕಾರ ಇರುವಾಗ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭ ಮಾಡಿದ್ದೆವು. ಬೆಂಗಳೂರು ನಗರದ ಎಲ್ಲಾ 198 ವಾರ್ಡ್ ಗಳಲ್ಲಿ ಆರಂಭ ಮಾಡಿದ್ದೆವು. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆರಂಭ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು, ಅಷ್ಟೊತ್ತಿಗೆ ನಮ್ಮ ಸರ್ಕಾರ ಅಧಿಕಾರದಿಂದ ಹೋಗಿ ಸಮ್ಮಿಶ್ರ ಸರ್ಕಾರ ಬಂದಿತು. ಆ ನಂತರ ಆಪರೇಷನ್ ಕಮಲದ ಅನೈತಿಕ ಮಾರ್ಗದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ನಾವು ಇಂದಿರಾ ಗಾಂಧಿ ಅವರ ಹೆಸರಿಟ್ಟು ಕ್ಯಾಂಟೀನ್ ಗಳನ್ನು ಆರಂಭ ಮಾಡಿದ್ದೆವು. ಕ್ಯಾಂಟೀನ್ ಸ್ಥಾಪನೆಯ ನಮ್ಮ ಉದ್ದೇಶ ಬಡವರು, ಹಳ್ಳಿಗಳಿಂದ ಬರುವ ಜನರು, ಆಸ್ಪತ್ರೆಗಳಿಗೆ ಬರುವವರು, ವಿದ್ಯಾರ್ಥಿಗಳು ಮುಂತಾದವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗಬೇಕು ಎಂಬುದಾಗಿತ್ತು. ಒಟ್ಟು ನಾವು 400 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪನೆ ಮಾಡಿದ್ದೆವು' ಎಂದು ತಿಳಿಸಿದರು.
'ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿದೆ. ಇದು ಬಡ ಜನರಿಗೆ ಮಾಡುತ್ತಿರುವ ದ್ರೋಹವಾಗುತ್ತದೆ. ಜಯಲಲಿತ ಅವರು ಆರಂಭ ಮಾಡಿದ್ದ ಅಮ್ಮ ಕ್ಯಾಂಟೀನ್ ಗಳನ್ನು ಡಿಎಂಕೆ ಸರ್ಕಾರ ಬಂದ ಮೇಲೆ ಮುಚ್ಚಲಿಲ್ಲ, ಅದನ್ನು ಮುಂದುವರೆಸಿಕೊಂಡು ಹೋಗಿದ್ದರು. ಈ ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಇನ್ನೂ 300 ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯುವುದಾಗಿ ಹೇಳಿ ಈಗ ಮುಚ್ಚಲು ಹೊರಟಿದ್ದಾರೆ. ಇದು ಬಡವರು, ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಿನ್ನೆ ಬ್ಯಾಡಗಿ, ಹಿರೇಕೆರೂರಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಯುತ್ತಿದೆಯಾ ಎಂದು ಕೇಳಿದೆ, ಈ ಎಲ್ಲಾ ಕಡೆ ಮುಚ್ಚಿದ್ದಾರಂತೆ. ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿದ್ದ ಇಂದಿರಾ ಕ್ಯಾಂಟೀನನ್ನು ಮುಚ್ಚಿದ್ದಾರೆ. ಬೆಂಗಳೂರು ನಗರದ ಎಲ್ಲಾ 198 ವಾರ್ಡ್ ಗಳಲ್ಲಿ ಕ್ಯಾಂಟೀನ್ ಆರಂಭ ಮಾಡಿದ್ದೆವು. ಪ್ರತಿ ಹೊತ್ತು ಸುಮಾರು 500 ಜನ ಒಂದೊಂದು ಕ್ಯಾಂಟೀನ್ ನಲ್ಲಿ ತಿಂಡಿ, ಊಟ ಮಾಡುತ್ತಿದ್ದರು' ಎಂದು ವಿವರಿಸಿದ್ದಾರೆ.
'ಯಾವ ಕಾರಣಕ್ಕೂ ಈ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಬಾರದು ಎಂದು ನಾನು ಒತ್ತಾಯ ಮಾಡುತ್ತೇನೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿದೆ ಎಂಬ ಕಾರಣಕ್ಕೆ ಈ ಕ್ಯಾಂಟೀನ್ ಗಳನ್ನು ಮುಚ್ಚಲು ಹೋಗಬಾರದು. ವಾಜಪೇಯಿ, ಸಾವರ್ಕರ್, ದೀನದಯಾಳ್ ಉಪಾಧ್ಯಾಯ ಹೆಸರಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿಕೊಂಡಿದ್ದಾರೆ, ಅವನ್ನೆಲ್ಲಾ ನಾವು ತೆಗೆದುಹಾಕುತ್ತೇವೆ ಎಂದು ಹೇಳಿದ್ದೇವಾ? ಇಂದಿರಾ ಕ್ಯಾಂಟೀನ್ ನಮ್ಮ ಸರ್ಕಾರದ ಕಾರ್ಯಕ್ರಮ, ಹಿಂದಿನಿಂದ ಜನರ ಹಸಿವು ನೀಗಿಸುತ್ತಾ ಬಂದಿದೆ, ಯಾವುದೇ ಕಾರಣಕ್ಕೂ ಇದನ್ನು ಮುಚ್ಚುವುದು ಬೇಡ ಎಂದು ಒತ್ತಾಯ ಮಾಡುತ್ತೇನೆ. ಮುಚ್ಚುವ ತಪ್ಪು ಮಾಡಿದರೆ ಜನ ನಿಮಗೆ ಶಾಪ ಹಾಕುತ್ತಾರೆ' ಎಂದು ಸರಕಾರವನ್ನು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.







