ಪರೀಕ್ಷಾ ಒತ್ತಡ: 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಗುರುಗ್ರಾಮ: ಇಲ್ಲಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪರೀಕ್ಷಾ ಒತ್ತಡವನ್ನು ತಾಳದೆ ತಾನಿದ್ದ 13ನೇ ಮಹಡಿಯ ಫ್ಲ್ಯಾಟ್‌ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ ಎಂದು theprint.in ವರದಿ ಮಾಡಿದೆ.
ಈ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದ್ದು, 17 ವರ್ಷ ವಯಸ್ಸಿನ ತರುಣ ರಿಟ್ರೀಟ್ ಸೊಸೈಟಿ, ಸೆಕ್ಟರ್ 41ರಲ್ಲಿನ ಸೌತ್ ಸಿಟಿಯಲ್ಲಿ ವಾಸಿಸುತ್ತಿದ್ದ ಎಂದು ಅವರು ಹೇಳಿದ್ದಾರೆ.
ಆತ ತನ್ನ ವ್ಯಾಸಂಗ ಹಾಗೂ ನಡೆಯುತ್ತಿರುವ ಅಂತಿಮ ಘಟ್ಟದ ಪರೀಕ್ಷೆಯ ಬಗ್ಗೆ ಚಿಂತಿತನಾಗಿದ್ದ ಎಂದು ತಿಳಿಸಿರುವ ಪೊಲೀಸರು, ಸ್ಥಳದಲ್ಲಿ ಯಾವುದೇ ಮರಣ ಪತ್ರ ದೊರೆತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ತರುಣನು ತನ್ನ ಫ್ಲ್ಯಾಟ್‌ನ ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದಾನೆ. ಆ ಸದ್ದನ್ನು ಕೇಳಿದ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದಾಗ, ಆತ ರಕ್ತದ ಮಡುವಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಕೂಡಲೇ ಆತನನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ಸಾಗಿಸಿದರಾದರೂ, ಆಸ್ಪತ್ರೆಗೆ ತರುವ ಮುನ್ನವೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿಯ ಮೃತದೇಹವನ್ನು ಮಂಗಳವಾರ ಆತನ ಪೋಷಕರಿಗೆ ಹಸ್ತಾಂತರಿಸಲಾಯಿತು ಎಂದೂ ಅವರು ಹೇಳಿದ್ದಾರೆ.







