ಬೋರ್‌ವೆಲ್ ನೊಳಗೆ ಬಿದ್ದ 7 ವರ್ಷದ ಬಾಲಕನನ್ನು ರಕ್ಷಿಸಿದರೂ ಬದುಕುಳಿಯಲಿಲ್ಲ

ವಿದಿಶಾ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬೋರ್‌ವೆಲ್‌ಗೆ ಬಿದ್ದ 7 ವರ್ಷದ ಬಾಲಕನನ್ನು ಸುಮಾರು 24 ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಆದರೆ ಬಾಲಕನು ಬದುಕುಳಿಯಲಿಲ್ಲ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಪರೀಕ್ಷಿಸಿದ ನಂತರ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು ಎಂದು ವಿದಿಶಾ ಜಿಲ್ಲಾಧಿಕಾರಿ ಉಮಾ ಶಂಕರ್ ಭಾರ್ಗವ ಸುದ್ದಿಗಾರರಿಗೆ ತಿಳಿಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಾಲಕನ ಕುಟುಂಬಕ್ಕೆ 4 ಲಕ್ಷ ರೂ. ನೆರವು ಘೋಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬೋರ್‌ವೆಲ್‌ಗೆ ಬಿದ್ದ ಸುಮಾರು 24 ಗಂಟೆಗಳ ನಂತರ ಬಾಲಕನನ್ನು ರಕ್ಷಿಸಲಾಗಿದ್ದು, ಆ ನಂತರ ಜಿಲ್ಲಾ ಕೇಂದ್ರದಿಂದ ಸುಮಾರು 14 ಕಿ.ಮೀ. ದೂರದಲ್ಲಿರುವ ಲ್ಯಾಟೇರಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ಸಾಗಿಸಲಾಯಿತು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಹರ್ಷಲ್ ಚೌಧರಿ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬಾಲಕ 60 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದು, 43 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಗುವನ್ನು ಹೊರತೆಗೆಯಲು ಜೆಸಿಬಿ ಯಂತ್ರಗಳ (ಅರ್ತ್‌ಮೂವರ್) ಸಹಾಯದಿಂದ ಸಮಾನಾಂತರ ಹೊಂಡವನ್ನು ಅಗೆಯಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಲಾಟೇರಿ ತಹಸಿಲ್ ವ್ಯಾಪ್ತಿಯ ಖೇರ್ಖೇಡಿ ಪಥರ್ ಗ್ರಾಮದಲ್ಲಿ ಲೋಕೇಶ್ ಅಹಿರ್ವಾರ್ ಎಂಬ ಬಾಲಕ ಆಟವಾಡುತ್ತಿದ್ದಾಗ ಕಿರಿದಾದ ರಂಧ್ರಕ್ಕೆ ಜಾರಿ ಬಿದ್ದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗ್ರಾಮಸ್ಥರು ಎಚ್ಚರಿಸಿದ ನಂತರ ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಮಗುವನ್ನು ಹೊರ ತೆಗೆಯಲು ಕಾರ್ಯಾಚರಣೆಯನ್ನು ಆರಂಭಿಸಿತು ಎಂದು ಚೌಧರಿ ಹೇಳಿದರು.







