ಜಾಗತಿಕ ಪರಿಸರ ಬಿಕ್ಕಟ್ಟು ಉನ್ನತ ಶಿಕ್ಷಣದ ಮುಂದಿರುವ ಸವಾಲು: ಪ್ರೊ.ಎಸ್.ಸಿ.ಶರ್ಮಾ
ಮಂಗಳೂರು ವಿವಿ 41ನೆ ಘಟಿಕೋತ್ಸವ: 155 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಮೂವರಿಗೆ ಗೌರವ ಡಾಕ್ಟರೇಟ್

ಮಂಗಳೂರು, ಮಾ.15: ಪರಿಸರ ಬಿಕ್ಕಟ್ಟು ಉನ್ನತ ಶಿಕ್ಷಣದ ಮುಂದಿರುವ ಬಹು ದೊಡ್ಡ ಸವಾಲಾಗಿದೆ ಎಂದು ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್‌ನ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮ ಹೇಳಿದ್ದಾರೆ.
ಅವರು ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿಂದು ಜರುಗಿದ ಮಂಗಳೂರು ವಿಶ್ವವಿದ್ಯಾ ನಿಲಯದ 41ನೇ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿದರು.
"ಭಾರತದಲ್ಲಿ ಉನ್ನತ ಶಿಕ್ಷಣದ ರಚನೆಯನ್ನು ಪ್ರತಿಬಿಂಬಿಸುವ ಮೊದಲು, ಇಂದು ನಾವು ಎದುರಿಸುತ್ತಿರುವ ಒಂದು ಪ್ರಮುಖ ಬಿಕ್ಕಟ್ಟುಗಳಲ್ಲಿ ಒಂದಾಗಿದೆ ಪರಿಸರ ಬಿಕ್ಕಟ್ಟು. ಜಾಗತಿಕ ಉನ್ನತ ಶಿಕ್ಷಣ ವ್ಯವಸ್ಥೆಯ ಮುಂದಿರುವ ಒಂದು ಸವಾಲು ಎಂದರೆ ಪರಿಸರದ ಸಮಸ್ಯೆಗಳು. ಈ ಪರಿಸರ ಸಮಸ್ಯೆಯು ನೈಸರ್ಗಿಕ ಘಟನೆಗಳು ಮತ್ತು ಮಾನವ ಹಸ್ತಕ್ಷೇಪದಿಂದ ಉಂಟಾಗಬಹುದು. ನೈಸರ್ಗಿಕ ವಿಕೋಪಗಳನ್ನು ಅರ್ಥ ಮಾಡಿಕೊಳ್ಳುವಾಗ, ಮಾನವ ನಿರ್ಮಿತ ಪರಿಸರದ ಅಪಾಯಗಳ ಬಗ್ಗೆ ನಾವು ಆಳವಾಗಿ ಯೋಚಿಸಬೇಕು" ಎಂದು ಪ್ರೊ.ಎಸ್.ಸಿ. ಶರ್ಮಾ ತಿಳಿಸಿದ್ದಾರೆ.
ಒಬ್ಬ ವ್ಯಕ್ತಿಯು ಕಲಿಸುವುದು ಮತ್ತು ಅದರ ನಿರ್ವಹಣೆ ಎರಡನ್ನೂ ಸಮರ್ಥವಾಗಿ ನಿರ್ವಹಿಸಬಹುದಾದರೆ, ಅವನನ್ನು 'ಅತ್ಯುತ್ತಮ ಶಿಕ್ಷಕ' ಎಂದು ಪರಿಗಣಿಸಬೇಕು. ವಿಶ್ವವಿದ್ಯಾನಿಲಯದ ಬೋಧನೆಯು ನಮ್ಮ ಸಂಶೋಧನೆಯ ಜೊತೆಯಲ್ಲಿ ಸಾಗಬೇಕು. ಆದ್ದರಿಂದ, ನಾವು ತರಗತಿಯಲ್ಲಿ ನಿರ್ದಿಷ್ಟ ಘಟಕವನ್ನು ಕಲಿಸುತ್ತಿದ್ದರೂ, ಸಂಶೋಧನೆಯತ್ತ ಗಮನಹರಿಸುವಂತಾಗಬೇಕು. ಉದಾಹರಣೆಗೆ ಸಾಹಿತ್ಯ ತರಗತಿಯಲ್ಲಿ ಕವಿತೆ ಅಥವಾ ವಿಜ್ಞಾನ ತರಗತಿಯಲ್ಲಿ ಅಣುವಿನ ರಚನೆಯ ಬಗ್ಗೆ ತಿಳಿಸುವ ಸಂದರ್ಭದಲ್ಲಿ ನಾವು ನಮ್ಮ ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸುವುದು ಹೇಗೆ ಎಂದು ಕಲಿಸುತ್ತಿದ್ದೇವೆ ಎಂದು ನಾವು ಭಾವಿಸಬೇಕು. ಕವಿತೆಯ ಬಗ್ಗೆ ಸಣ್ಣ ಸಂಶೋಧನೆ ನಡೆಸುವುದು ಅಥವಾ ಅಣುವಿನ ರಚನೆಯನ್ನು ಅರ್ಥಮಾಡಿ ಕೊಳ್ಳುವುದು ಹೇಗೆ ಎಂದು ನಾವು ಅವರಿಗೆ ಕಲಿಸಬೇಕು ಎಂದರು.
ವಿಶ್ವವಿದ್ಯಾನಿಲಯದಲ್ಲಿ, ಬೋಧನೆ ಮತ್ತು ಸಂಶೋಧನೆಯು ಜೊತೆಯಲ್ಲಿ ನಡೆಯಬೇಕು. ನಮ್ಮ ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನಹರಿಸಬೇಕಾಗಿದೆ.ಶಿಕ್ಷಣವೆಂದರೆ ನಾವು ಶಾಲೆಗಳು, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪಡೆಯುವ ಜ್ಞಾನ ಮಾತ್ರವಲ್ಲ, ಬದಲಾಗಿ ನಮ್ಮ ಸುತ್ತಲಿನ ಈ ಪ್ರಪಂಚದ ಜ್ಞಾನವನ್ನು ಪಡೆಯುವ ಪ್ರವೃತ್ತಿ ಎಂದು ಭಾವಿಸುತ್ತೇನೆ. ಪದವಿ ಮುಗಿದ ನಂತರ, ಈ ಜಗತ್ತಿನ ಉತ್ತಮ ಭಾಗವಾಗಲು ಈ ಜಗತ್ತಿನಾದ್ಯಂತ ಇರುವ ಉತ್ತಮ ಮೌಲ್ಯಗಳನ್ನು ನಾವು ಹೊಂದು ವಂತಾಗಬೇಕು ಎಂದು ಪ್ರೊ.ಶರ್ಮಾ ನುಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತು ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿನ ಪ್ರಸ್ತುತ ಬಿಕ್ಕಟ್ಟು ಎಂದರೆ ನಾವು ಶಿಕ್ಷಣದ ಪರಿಕಲ್ಪನೆಯನ್ನು ಕಳೆದುಕೊಂಡಿದ್ದೇವೆ. ವಿಶ್ವವಿದ್ಯಾನಿಲಯ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಅರ್ಥವನ್ನು ನಾವು ಮರೆತಿದ್ದೇವೆ. ಇಮ್ಯಾನುಯೆಲ್ ಕಾಂಟ್, ಹಂಬೋಲ್ಟ್, ನ್ಯೂಮನ್ ಮತ್ತು ಇತರ ಶ್ರೇಷ್ಠ ಯುರೋಪಿಯನ್ ಚಿಂತಕರು ಮಂಡಿಸಿದ ವಿಶ್ವವಿದ್ಯಾನಿಲಯದ ಕಲ್ಪನೆಯ ಕೊರತೆಯಿಂದಾಗಿ, ಭಾರತದಲ್ಲಿ ವಿಶ್ವವಿದ್ಯಾ ನಿಲಯದ ಕಲ್ಪನೆಯ ಸ್ಪಷ್ಟವಾದ ಚೇತರಿ ಕೆಯ ಅವಶ್ಯಕತೆಯಿದೆ ಎಂಬುವುದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಆತ್ಮ ನಿರ್ಭರ ಭಾರತ ಮಾಡಲು ಸರಕಾರ ಯೋಚಿಸುತ್ತಿದೆ. ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಅದನ್ನು ಸಾಕಾರ ಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಸ್ಥಳೀಯ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ನೀಡಲು ಕರ್ನಾಟಕ ಸರಕಾರ ಹೊರಟಿರು ವುದು ಸ್ವಾಗತಾರ್ಹ. ಜರ್ಮನ್, ಜಪಾನ್ ಹಲವು ತಂತ್ರಜ್ಞಾನದಲ್ಲಿ ಮುಂದಿದ್ದಾರೆ. ಅವರು ಸ್ಥಳೀಯ ಭಾಷೆಗಳಲ್ಲಿ ಅಧ್ಯಯನ ಮಾಡುತ್ತಾ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು.
ಪರಿಸರ ಸಂರಕ್ಷಣೆ ನಮ್ಮ ಮುಂದಿರುವ ಬಹು ದೊಡ್ಡ ಸವಾಲು. ಈ ಜಗತ್ತು ಒಂದು ಕುಟುಂಬ ಅದರಲ್ಲಿ ಮನುಷ್ಯ ಒಬ್ಬ ಸದಸ್ಯ ಎನ್ನುವುದು ಮನಗಂಡು ಬದುಕಬೇಕಾಗಿದೆ. ಪರಿಸರ ವನ್ನು ಸಂರಕ್ಷಿಸಬೇಕಾಗಿದೆ ಎಂದರು.
*115 ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ:
ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಒಬ್ಬರಿಗೆ ಡಾಕ್ಟರ್ ಆಫ್ ಸಾಯನ್ಸ್ (ಪ್ರಾಣಿಶಾಸ್ತ್ರ), 115 ಮಂದಿಗೆ ಡಾಕ್ಟರ್ ಆಫ್ ಫಿಲಾಸಪಿ ಪದವಿ (ಪಿಎಚ್‌ಡಿ) ನೀಡಲಾಗುತ್ತಿದ್ದು, ಈ ಪೈಕಿ ಕಲಾ ವಿಭಾಗದಲ್ಲಿ 29, ವಿಜ್ಞಾನ 61, ವಾಣಿಜ್ಯ 22, ಶಿಕ್ಷಣ ವಿಭಾಗದಲ್ಲಿ 3 ಮಂದಿ ಪಿಎಚ್ ಡಿ ಪದವಿ ಪಡೆಯಲಿದ್ದಾರೆ. ಇವರಲ್ಲಿ 60 ಮಂದಿ ಪುರುಷರು ಹಾಗೂ 55 ಮಂದಿ ಮಹಿಳೆಯರು ಸೇರಿದ್ದಾರೆ. ವಿದೇಶದ ಏಳು ವಿದ್ಯಾರ್ಥಿಗಳು ಈ ಬಾರಿ ಪಿಎಚ್‌ಡಿ ಪದವಿ ವಾರ್ಷಿಕ ಘಟಿಕೋತ್ಸವದಲ್ಲಿ ನೀಡಲಾಯಿತು.
*155 ಮಂದಿಗೆ ಚಿನ್ನದ ಪದಕ, 57 ನಗದು ಬಹುಮಾನ, ವಿವಿಧ ಕೋರ್ಸುಗಳ ಒಟ್ಟು 199 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪೈಕಿ ಪ್ರಥಮ ರ‍್ಯಾಂಕ್ ಪಡೆದ 71 ಮಂದಿಗೆ (ಸ್ನಾತಕೋತ್ತರ ಪದವಿ-53 ಮತ್ತು ಪದವಿ-18) ಪ್ರಮಾಣ ಪತ್ರ ವಿತರಿಸಲಾಯಿತು.
ಕಲೆ-17, ವಿಜ್ಞಾನ ಮತ್ತು ತಂತ್ರಜ್ಞಾನ-41, ವಾಣಿಜ್ಯ 9, ಶಿಕ್ಷಣದಲ್ಲಿ 4 ಮಂದಿಗೆ ರ‍್ಯಾಂಕ್ ಪ್ರಮಾಣ ಪತ್ರ ನೀಡಲಾಯಿತು.
ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಸ್ವಾಗತಿಸಿ ಪದವಿ, ಪಿಎಚ್ ಡಿ ಮತ್ತು ಗೌರವ ಡಾಕ್ಟರೇಟ್ ಪದವಿ ಪಡೆದವರ ವಿವರಗಳೊಂದಿಗೆ ವಿಶ್ವ ವಿದ್ಯಾನಿಲಯದ ವಾರ್ಷಿಕ ವರದಿ ವಾಚಿಸಿದರು.
*ಮೂವರಿಗೆ ಗೌರವ ಡಾಕ್ಟರೇಟ್
ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು (ಶಿಕ್ಷಣ ಮತ್ತು ಸಮಾಜ ಸೇವೆ ), ಕುಂದಾಪುರ ಗಂಗೊಳ್ಳಿಯ ಜಿ.ರಾಮಕೃಷ್ಣ ಆಚಾರ್( ಕೃಷಿ, ಶಿಕ್ಷಣ ಮತ್ತು ಸಮಾಜ ಸೇವೆ) ಮತ್ತು ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ (ಶಿಕ್ಷಣ ಮತ್ತು ಸಮಾಜ ಸೇವೆ) ಅವರಿಗೆ ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಮಂಗಳೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ರಾಜು ಕೃಷ್ಣ ಚಲಣ್ಣವರ, ಆಡಳಿತ ವಿಭಾಗದ ಕುಲಸಚಿವ ಡಾ.ಕಿಶೋರ್ ಕುಮಾರ್, ವಿವಿಧ ವಿಭಾಗದ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.