ಮಂಗಳೂರು ವಿವಿ ಪದವಿ ಪಠ್ಯದಲ್ಲಿ ಹರೇಕಳದ ರೈತಪರ ಹೋರಾಟಗಾರ ಮೊಯ್ದಿನ್

ಮಂಗಳೂರು, ಮಾ.15: ಮಂಗಳೂರು ವಿಶ್ವವಿದ್ಯಾನಿಲಯ ಮೊದಲ ವರ್ಷದ ಬಿ.ಸಿ.ಎ. ಪದವಿಯ ಕನ್ನಡ ಪಠ್ಯಪುಸ್ತಕದಲ್ಲಿ ಹರೇಕಳ ಗ್ರಾಮದ ಖ್ಯಾತ ಪರಿಸರವಾದಿ, ರೈತಪರ ಹೋರಾಟಗಾರ ದಿವಂಗತ ಮೊಯ್ದಿನ್‌ರ ಬದುಕು ಮತ್ತು ಹೋರಾಟದ ಕುರಿತಂತೆ ಲೇಖಕ ಇಸ್ಮತ್ ಪಜೀರ್ ಬರೆದ ಪಠ್ಯವನ್ನು ಅಳವಡಿಸಲಾಗಿದೆ.
ಹರೇಕಳ ಮೊಯ್ದಿನ್ 2002ರಲ್ಲಿ ನಿಧನರಾಗಿದ್ದರೂ ನಾಡಿಗೆ ಅವರು ನೀಡಿದ ಕೊಡುಗೆಯನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡಬೇಕೆಂಬ ಉದ್ದೇಶದಲ್ಲಿ ಬರೆದ ಲೇಖನವನ್ನು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕ ರಚನಾ ಸಮಿತಿಯು ಪಠ್ಯವಾಗಿ ಅಳವಡಿಸಿದೆ ಎಂದು ಲೇಖಕ ಪಜೀರ್ ತಿಳಿಸಿದ್ದಾರೆ.
ಒಂದು ಕಾಲಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಕ್ಯಾಂಪಸ್ ಬರೀ ಕಪ್ಪು ಕಲ್ಲಿನ ಗುಡ್ಡವಾಗಿತ್ತು. ಅದು ಇಂದು ಹಚ್ಚ ಹಸುರಿನಿಂದ ನಳನಳಿಸುತ್ತಿದ್ದರೆ ಅದಕ್ಕೆ ಕಾರಣ ವಿವಿಯ ಎರಡನೇ ಕುಲಪತಿ ಪ್ರೊ.ಶಫಿಯುಲ್ಲಾರ ಇಚ್ಛಾಶಕ್ತಿ ಮತ್ತು ಹರೇಕಳ ಮೊಯ್ದಿನ್‌ರ ಶ್ರಮ. ಮೊಯ್ದಿನ್ ಅವರು ಹರೇಕಳ, ಪಾವೂರು, ಪಜೀರು, ಬೋಳಿಯಾರು, ಕುರ್ನಾಡು ಅಂಬ್ಲಮೊಗರು, ಮುನ್ನೂರು, ಪೆರ್ಮನ್ನೂರು ಮುಂತಾದ ಗ್ರಾಮಗಳಲ್ಲಿ ಸುಮಾರು ನಲ್ವತ್ತು ವರ್ಷಗಳ ಹಿಂದೆಯೇ ಸಾಲು ಮರಗಳನ್ನು ನೆಟ್ಟು ಅವನ್ನು ಪೋಷಿಸಿದ್ದರು. ಆದುದರಿಂದ ಅವರ ಕುರಿತ ಪಠ್ಯಕ್ಕೆ 'ಸಾಲುಮರಗಳ ಹರೇಕಳ ಮೊಯ್ದಿನ್' ಎಂಬ ಶೀರ್ಷಿಕೆ ನೀಡಿರುವೆ ಎಂದು ಪಜೀರ್ ತಿಳಿಸಿದ್ದಾರೆ.
ಹರೇಕಳ ಮೊಯ್ದಿನ್ ಕೇವಲ ಪರಿಸರವಾದಿ ಮಾತ್ರವಾಗಿರದೇ ಹರೇಕಳ ಗ್ರಾಮದ ನೂರಾರು ಭೂ ರಹಿತ ರೈತರಿಗೆ ಭೂಮಿಯ ಒಡೆತನ ಕೊಡಿಸಲು ಹೋರಾಟ ನಡೆಸಿದವರು. ಅದಲ್ಲದೆ ಸುಮಾರು ಐವತ್ತು ವರ್ಷಗಳ ಹಿಂದೆಯೇ ಅವರು ಗ್ರಾಮೀಣ ಯುವಜನರಿಗೆ, ಮಹಿಳೆಯರಿಗೆ ಮತ್ತು ರೈತರಿಗೆ ವಿವಿಧ ಸ್ವ ಉದ್ಯೋಗ ತರಬೇತಿ ಕೇಂದ್ರವನ್ನೂ ಸ್ಥಾಪಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಶ್ರಮಿಸಿದ್ದರು. ನಾಟಿ ವೈದ್ಯರೂ ಆಗಿದ್ದ ಮೊಯ್ದಿನ್ ಔಷಧೀಯ ಸಸ್ಯಗಳ ಕುರಿತಂತೆ ಮೂರು ಕೃತಿಗಳನ್ನೂ ಬರೆದಿದ್ದರು.
ಪಕ್ಕದ ಪಜೀರು ಗ್ರಾಮದವರಾದ ಲೇಖಕ ಇಸ್ಮತ್ ಪಜೀರ್ ಈ ಹಿಂದೆ ಇದೇ ಹರೇಕಳ ಗ್ರಾಮದ ಹಾಜಬ್ಬರ ಕುರಿತು ಬರೆದ 'ಹೀಗೊಬ್ಬ ಅಕ್ಷರ ಸಂತ' ಎಂಬ ಲೇಖನವು ಮಂಗಳೂರು ವಿವಿ, ಯೆನೆಪೊಯ ಸ್ವಾಯತ್ತ ವಿವಿ, ತುಮಕೂರು ವಿವಿ ಮತ್ತು ಕೇರಳ ಪ್ರೌಢಶಾಲೆಗೆ ಪಠ್ಯವಾಗಿದೆ. ಸಾಲುಮರಗಳ ಹರೇಕಳ ಮೊಯ್ದಿನ್ ಎಂಬ ಪಠ್ಯ ಹರೇಕಳ ಗ್ರಾಮದ ಸಾಧಕರಿಗೆ ಸಿಗುತ್ತಿರುವ ಎರಡನೇ ಪಠ್ಯ ಗೌರವ.







