ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಚಿನ್ನಾಭರಣ ಕಳವು ಪ್ರಕರಣ: 8 ಗಂಟೆಯೊಳಗೆ ಆರೋಪಿಗಳ ಬಂಧನ
ಉಡುಪಿ, ಮಾ.15: ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಭೇದಿಸಿದ ಮಣಿಪಾಲ ಪೊಲೀಸರು, ಕೇವಲ 8 ಗಂಟೆಯೊಳಗೆ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತ ನಗರದ ಲಲಿತಾ ಬೋವಿ(41) ಹಾಗೂ ಸುಶೀಲಮ್ಮ ಬೋವಿ(64) ಬಂಧಿತ ಆರೋಪಿಗಳು. ಇವರಿಂದ ಕಳವು ಮಾಡಿದ 4,03,000 ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾಪು ಕುತ್ಯಾರು ಕೇಂಜಾ ನಿವಾಸಿ ವಸಂತ್ ಕುಮಾರ್ ಹೆಗ್ಡೆ ಎಂಬವರ ಪತ್ನಿ ಪುನೀತ್ ವಸಂತ್ ಹೆಗ್ಡೆ(69) ತಮ್ಮ ಕುಟುಂಬದೊಂದಿಗೆ ಮುಂಬೈಗೆ ತೆರಳಲು ಮಂಗಳೂರು-ಮುಂಬೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಅದರಂತೆ ಅವರು ಮಾ.14ರಂದು ಅಪರಾಹ್ನ 3:35ರ ಸುಮಾರಿಗೆ ಗಂಟೆಗೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ಕಳ್ಳರು ವ್ಯಾನಿಟಿ ಬ್ಯಾಗ್ ಜಿಪ್ ತೆರೆದು ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ ವ್ಯಾಚ್ ಕಳವು ಮಾಡಿದ್ದಾರೆನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ತಕ್ಷಣ ಕಾರ್ಯಪ್ರವೃತರಾದ ಮಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಎಸ್ಸೈ ನವೀನ್ ನಾಯ್ಕ, ಎಎಸ್ಸೈ ಶೈಲೇಶ್, ಸಿಬ್ಬಂದಿ ಇಮ್ರಾನ್, ಶುಭ, ಅರುಣಾ ಚಾಳೇಕರ್ ತಂಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೇ ಪೊಲೀಸರ ಸಹಕಾರದೊಂದಿಗೆ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಕಲೆ ಹಾಕಿತು. ಅದರ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿ ಘಟನೆ ನಡೆದ 8 ಗಂಟೆಗಳ ಒಳಗೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ಮಾ.15ರಂದು ಬೆಳಗ್ಗೆ 6:30 ಗಂಟೆಗೆ ಮಪಾಲ ಟೈಗರ್ ಸರ್ಕಲ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳು ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವುದು, ಪಿಕ್ ಪಾಕೇಟ್ ಹಾಗೂ ಜನಸಂದಣಿಯಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿ ಕೊಂಡು ಕಳ್ಳತನ ಮಾಡುವ ಚಾಳಿ ಉಳ್ಳವರಾಗಿರುವುದು ತನಿಖೆಯಿಂದ ಕಂಡು ಬಂದಿದೆ. ಇವರ ವಿರುದ್ಧ ಈ ಹಿಂದೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.