ಇಲೈಟ್ ಪ್ರೊ ಬಾಸ್ಕೆಟ್‌ಬಾಲ್ ಲೀಗ್: ಡೆಲ್ಲಿ ಡಾಮಿನೇಟರ್ಸ್ ತಂಡಕ್ಕೆ ಮಂಗಳೂರಿನ ಝೀಮಾಮುದ್ದೀನ್

ಮಂಗಳೂರು: ಮಂಗಳೂರಿನ 25 ವರ್ಷದ ಝೀಮಾಮುದ್ದೀನ್ ಅವರು ದೇಶದ ಪ್ರಪ್ರಥಮ ಪ್ರೊ ಬಾಸ್ಕೆಟ್ ಬಾಲ್ ಲೀಗ್ ಆಗಿರುವ ಇಲೈಟ್ ಪ್ರೊ ಬಾಸ್ಕೆಟ್‌ಬಾಲ್ ಲೀಗ್ ನಲ್ಲಿ ಡೆಲ್ಲಿ ಡಾಮಿನೇಟರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮೂಲತಃ ಮಂಗಳೂರಿನ ಕುದ್ರೋಳಿಯ ಝೀಮಾಮುದ್ದೀನ್ ಅವರು ಝೀನತ್ ಝಹೀರ್ ಮತ್ತು ಝಹೀರುದ್ದೀನ್ ದಂಪತಿಯ ಪುತ್ರ.
ತಮ್ಮ ಶಿಕ್ಷಣವನ್ನು ದುಬೈನಲ್ಲಿ ಪೂರ್ಣಗೊಳಿಸಿದ ಝೀಮಾಮುದ್ದೀನ್, ಅಲ್ಲೇ ಬಾಸ್ಕೆಟ್‌ಬಾಲ್ ಆಡುವ ಆಸಕ್ತಿಯನ್ನು ಬೆಳೆಸಿಕೊಂಡರು. ಪ್ರಸ್ತುತ ದಿಲ್ಲಿ ಡಾಮಿನೇಟರ್ಸ್‌ನೊಂದಿಗೆ ಪ್ರಿ-ಸೀಸನ್ ಆಡುತ್ತಿರುವ ಅವರು, ದುಬೈ ನಿಮ್ಸ್‌ನಲ್ಲಿ ಓದುತ್ತಿರುವಾಗ ತಮ್ಮ 13 ನೇ ವಯಸ್ಸಿನಲ್ಲಿ ಬಾಸ್ಕೆಟ್‌ಬಾಲ್ ಆಡಲು ಪ್ರಾರಂಭಿಸಿರುವುದಾಗಿ ವಾರ್ತಾಭಾರತಿಗೆ ಹೇಳಿದ್ದಾರೆ.
“ನಾನು ಹೇಗೆ ಬಾಸ್ಕೆಟ್‌ಬಾಲ್ ಆಡಲು ಪ್ರಾರಂಭಿಸಿದ್ದು ಮತ್ತು ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡೆ ಅನ್ನುವುದು ಒಂದು ತಮಾಷೆಯ ಕಥೆ. ನಮ್ಮ ಶಾಲೆಯಲ್ಲಿ ಬಹಳಷ್ಟು ಭಾರತೀಯ ವಿದ್ಯಾರ್ಥಿಗಳು ಫುಟ್‌ಬಾಲ್ ಮತ್ತು ಕ್ರಿಕೆಟ್ ಆಡುತ್ತಿದ್ದರು. ಏಕೆಂದರೆ ಬಾಸ್ಕೆಟ್‌ಬಾಲ್ ಆ ಎರಡು ಕ್ರೀಡೆಗಳಂತೆ ಜನಪ್ರಿಯವಾಗಿರಲಿಲ್ಲ. ಹಾಗಾಗಿ ನಮಗೆ ಕ್ರಿಕೆಟ್ ಮತ್ತು ಫುಟ್ಬಾಲ್ ಆಡಲು ಅವಕಾಶ ಸಿಗುವುದಿಲ್ಲವೆಂದು ನಾನು ಮತ್ತು ನನ್ನ ಸ್ನೇಹಿತರು ಬಾಸ್ಕೆಟ್ ಬಾಲ್ ಆಡಲು ಪ್ರಾರಂಭಿಸಿದೆವು” ಎಂದು ದಿಲ್ಲಿಯಿಂದಲೇ ವಾರ್ತಾಭಾರತಿಯೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದ ಝೀಮಾಮುದ್ದೀನ್ ತಿಳಿಸಿದರು.
“ನಾನು ನನ್ನ 9 ನೇ ತರಗತಿಯಲ್ಲಿ ಒಂದು ವರ್ಷ ಭಾರತಕ್ಕೆ ಬಂದಾಗ ನಾನು ಆಟದ ಮೂಲಭೂತ ಅಂಶಗಳನ್ನು ಕಲಿತು, ಅದನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದೆ. ಪ್ರೆಸಿಡೆನ್ಸಿ ಶಾಲೆಯಲ್ಲಿ, ನನಗೆ ಆಟದ ಪ್ರಾಥಮಿಕ ಪಟ್ಟುಗಳನ್ನು ಕಲಿಸಿದರು. ನಂತರ ನಾನು ಮತ್ತೆ ಯುಎಇಯಲ್ಲಿ ಕಾಲೇಜು ಪರವಾಗಿ ಆಡಿದ್ದೇನೆ” ಎಂದು ಯುಎಇಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಝೀಮಾಮುದ್ದೀನ್ ಹೇಳಿದ್ದಾರೆ.
ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಝೀಮಾಮುದ್ದೀನ್ ಅವರನ್ನು ಡೆಲ್ಲಿ ಡಾಮಿನೇಟರ್ ತಂಡ ಆಯ್ಕೆ ಮಾಡಿತ್ತು, ಪ್ರಸ್ತುತ ಅವರು ಫ್ರಾಂಚೈಸಿಯೊಂದಿಗೆ ಪ್ರೀ ಸೀಸನ್ ಪಂದ್ಯಗಳನ್ನು ಆಡುತ್ತಿದ್ದಾರೆ. ಅವರು ಪ್ರೊ ಬಾಸ್ಕೆಟ್‌ಬಾಲ್ ಎಲೈಟ್‌ಗಾಗಿ ಫ್ರಾಂಚೈಸಿ ತಂಡದ ಭಾಗವಾಗಲಿದ್ದಾರೆ. ಪಂದ್ಯಾವಳಿಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.