ರೈತರ ಮಕ್ಕಳಿಗೆ ಕೃಷಿ ವಿವಿಯಲ್ಲಿ ಶೇ.50ರಷ್ಟು ಮೀಸಲಾತಿ: ಸಚಿವ ಬಿ.ಸಿ. ಪಾಟೀಲ್

ಬೆಂಗಳೂರು, ಮಾ.15: ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತರ ಮಕ್ಕಳಿಗೆ ಶೇ.40ರಷ್ಟಿದ್ದ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ರೈತರ ಮಕ್ಕಳು ಕೃಷಿ ಶಿಕ್ಷಣವನ್ನು ಪಡೆಯುವಂತಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದ ಕೃಷಿವಿಶ್ವವಿದ್ಯಾಯಲದ ಆವರಣದಲ್ಲಿ ಆಯೋಜಿಸಿದ್ದ 21ನೆ ಅಖಿಲ ಭಾರತ ಅಂತರ-ಕೃಷಿ ವಿಶ್ವವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ ಸಿರಿ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ರೈತರ ಮಕ್ಕಳಿಗೆ ನೀಡಿ ರೈತ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಹೆಕ್ಸಗನ್‍ನ ಹಿರಿಯ ನಿರ್ದೇಶಕ ಶಾಜೀ ಕೋಝಕುನ್ನನ್ ಮಾತನಾಡಿ, ಸರಕಾರವು ಜಾರಿ ಮಾಡಿರುವ ‘ಚತುರ ಕೃಷಿ ಅಭಿವೃದ್ಧಿ ಮತ್ತು ನಾವಿನ್ಯತಾ’ ಯೋಜನೆಯು ಜಾರಿಯಾಗುತ್ತಿದೆ. ಕೃಷಿಯಲ್ಲಿ ಪಾಲುದಾರರ ಅನುಕೂಲಕ್ಕಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ದೇಶದಲ್ಲಿ ಮೊದಲ ಬಾರಿಗೆ ಜಾರಿಗೊಳಿಸುತ್ತಿರುವ ಯೋಜನೆ ಇದಾಗಿದೆ. ಈ ಯೋಜನೆಯು ಸಹಭಾಗಿತ್ವ, ಬಹುಶಿಸ್ತೀಯ ಮತ್ತು ಪ್ರಾಯೋಗಿಕ ಕಾರ್ಯಕ್ರಮಗಳು ಆಯೋಜಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ನರೇಂದ್ರ ಸಿಂಗ್ ತೋಮರ್ ಮತ್ತಿತರರು ಉಪಸ್ಥಿತರಿದ್ದರು.