ಕೆಎಸ್‍ಡಿಎಲ್‍ಗೆ ಸೇರಿದ 37 ಎಕರೆ ಜಮೀನು ಖಾಸಗಿಗೆ ಹಸ್ತಾಂತರ: ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ತನಿಖೆಗೆ ಆಪ್ ಆಗ್ರಹ
ಬೆಂಗಳೂರು, ಮಾ.15: ಬೆಂಗಳೂರಿನ ಯಶವಂತಪುರದಲ್ಲಿ ಕರ್ನಾಟಕ ಸೋಪ್ ಹಾಗೂ ಡಿಟರ್ಜೆಂಟ್ ಲಿಮಿಟೆಡ್‍ಗೆ(ಕೆಎಸ್‍ಡಿಎಲ್) ಸೇರಿದ 37 ಎಕರೆ ಜಮೀನನ್ನು ಖಾಸಗಿಯವರಿಗೆ ನೀಡುತ್ತಿರುವುದಕ್ಕೆ ಸಂಬಂಧಿಸಿ, ಸಂಸ್ಥೆಯ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸೋಪ್ ಹಾಗೂ ಡಿಟರ್ಜೆಂಟ್ ಲಿಮಿಟೆಡ್ (ಕೆಎಸ್‍ಡಿಎಲ್) ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಹೊರಗುತ್ತಿಗೆ ನೀಡುತ್ತಿದೆ. ಸೋಪು, ಸ್ಯಾನಿಟೈಸರ್ ಮುಂತಾದವುಗಳ ಉತ್ಪಾದನೆಯನ್ನು ಕೂಡ ಹೊರಗುತ್ತಿದೆ ನೀಡುತ್ತಿದೆ. ಹೀಗಾಗಿ, ಬೆಂಗಳೂರಿನ ಯಶವಂತಪುರದಲ್ಲಿ ಕೆಎಸ್‍ಡಿಎಲ್‍ಗೆ ಸೇರಿದ 37 ಎಕರೆ ಜಾಗವಿದ್ದು, ಸರಕಾರ ಇದನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ ಎಂದು ಹೇಳಿದರು.
ಲೋಕಾಯುಕ್ತ ದಾಳಿಯಾದ ನಂತರ ಬಿಜೆಪಿ ಶಾಸಕ ಮಾಡಾಳ್ ವಿರೋಪಾಕ್ಷಪ್ಪರವರು ಸುಮಾರು ಐದು ದಿನಗಳು ನಾಪತ್ತೆಯಾಗಿದ್ದರು. ನಂತರ ಹೈಕೋರ್ಟ್ ಪ್ರತಿವಾದಿಗಳು ಇಲ್ಲದಿರುವಾಗ ಇವರಿಗೆ ಜಾಮೀನು ದೊರೆತಿದೆ ಎಂದು ಕಿಡಿಕಾರಿದರು.
ಮಾಡಾಳ್ ಅವರಿಗೆ ನೀಡಿರುವ ಜಾಮೀನನ್ನು ಪ್ರಶ್ನಿಸಿ ಲೋಕಾಯುಕ್ತ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಲೋಕಾಯುಕ್ತದ ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಹಲವು ಜನಪ್ರತಿನಿಧಿಗಳ ಬಳಿ ದೊಡ್ಡ ಪ್ರಮಾಣದ ಹಣವಿದೆ ಎಂಬ ಮಾಹಿತಿ ನಮಗೆ ದೊರೆತಿದೆ. ಹೀಗಾಗಿ, ಲೋಕಾಯುಕ್ತ ಅಧಿಕಾರಿಗಳು ಪ್ರತಿ ಜನಪ್ರತಿನಿಧಿ ಮನೆ ಹಾಗೂ ಕಚೇರಿಗಳ ದಾಳಿ ಮಾಡಬೇಕು. ಇದರಿಂದ, ಯಾರ್ಯಾರ ಬಳಿ ಏನೇನಿದೆ ಎಂಬ ಸತ್ಯ ಹೊರಬರಲಿದೆ ಎಂದು ಹೇಳಿದರು.
ಹೊಸದಿಲ್ಲಿಯ ಡಿಸಿಎಂ ಮನೀಷ್ ಸಿಸೋಡಿಯಾರವರ ಮನೆ ಹಾಗೂ ಕಚೇರಿ ಮೇಲೆ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ದಾಳಿ ಮಾಡಿ, ಸುಮಾರು ಸಾವಿರ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಆದರೆ ಅಲ್ಲಿ ಯಾವುದೇ ದೊಡ್ಡ ಪ್ರಮಾಣದ ನಗದು ಪತ್ತೆಯಾಗಿಲ್ಲದಿದ್ದರೂ ಸುಮಾರು ಹತ್ತು ದಿನಗಳಿಂದ ಅವರು ಬಂಧನದಲ್ಲಿದ್ದಾರೆ. ಭಾರೀ ಪ್ರಮಾಣದ ನಗದು ಪತ್ತೆಯಾಗಿದ್ದರೂ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಭೀತಿಯಿಲ್ಲದೇ ಹೊರಗಿದ್ದಾರೆ ಎಂದು ಹೇಳಿದರು.
ಕೆಎಸ್‍ಡಿಎಲ್ ಜಾಗವನ್ನು ಖಾಸಗಿಯವರಿಗೆ ನೀಡುವುದರ ಹಿಂದಿನ ಉದ್ದೇಶವೇನು ಎಂಬುದು ಜನರಿಗೆ ತಿಳಿಯಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ವಕ್ತಾರರಾದ ಉಷಾ ಮೋಹನ್ ಹಾಗೂ ಮುಖಂಡರಾದ ರಾಜೇಂದ್ರ ಉಪಸ್ಥಿತರಿದ್ದರು.