ನವಭಾರತ ರಾತ್ರಿ ಪ್ರೌಢಶಾಲೆಯ ಸಂಸ್ಥಾಪಕ ಹಾಜಿ ಖಾಲಿದ್ ಮುಹಮ್ಮದ್‌ರ ಜನ್ಮ ಶತಾಬ್ಧಿ ಕಾರ್ಯಕ್ರಮ

ಮಂಗಳೂರು : ನಗರದ ರಥಬೀದಿಯ ನವಭಾರತ ಎಜುಕೇಶನ್ ಸೊಸೈಟಿ (ರಿ)-ನವಭಾರತ ರಾತ್ರಿ ಪ್ರೌಢ ಶಾಲೆಯ ಸಂಸ್ಥಾಪಕ ದಿ. ಹಾಜಿ ಖಾಲಿದ್ ಮುಹಮ್ಮದ್‌ರ ಜನ್ಮಶತಾಬ್ಧಿ ಕಾರ್ಯಕ್ರಮವು ಬುಧವಾರ ನಗರದ ಪುರಭವನದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನವಭಾರತ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಹಾಗೂ ಸಂಸ್ಥಾಪಕರ ದೀರ್ಘಕಾಲದ ಒಡನಾಡಿ ‘ಬಡತನದಿಂದಾಗಿ ಅಕ್ಷರ ಜ್ಞಾನ ಪಡೆಯಲಾಗದ ನನ್ನಂತಹ ಅನೇಕ ಮಂದಿಗೆ ಶಿಕ್ಷಣ ನೀಡಿದ್ದ ಖಾಲಿದ್ ಮುಹಮ್ಮದ್ ಶೈಕ್ಷಣಿಕ ಶುಲ್ಕ ಭರಿಸಿದ ಹೃದಯ ಶ್ರೀಮಂತರು. ಶಿಸ್ತಿನ ಸಿಪಾಯಿಯೂ ಆಗಿದ್ದ ಅವರು ಧರ್ಮಸಹಿಷ್ಣುವಾಗಿದ್ದರು. ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಸದಾ ಆಶಿಸುತ್ತಿದ್ದರು. ದೇಶದ ಪ್ರಪ್ರಥಮ ರಾತ್ರಿ ಪ್ರೌಢಶಾಲೆಯಾಗಿರುವ ‘ನವಭಾರತ’ ಶಾಲೆಯ ಬಗ್ಗೆ ಅಭಿವೃದ್ಧಿಯ ಕನಸನ್ನು ಖಾಲಿದ್ ಮುಹಮ್ಮದ್ ಅವರು ಕಂಡಿದ್ದರು. ಅದನ್ನು ನನಸು ಮಾಡುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.
ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ವೈದ್ಯ ಡಾ. ಸತೀಶ್ ರಾವ್ ಮಾತನಾಡಿದರು. ವೇದಿಕೆಯಲ್ಲಿ ಖಾಲಿದ್ ಮುಹಮ್ಮದ್‌ರ ಪುತ್ರ ಫಕ್ರುದ್ದೀನ್ ಅಲಿ, ಅಳಿಯ ಪ್ರೊ. ಅಬ್ದುಲ್ ರಹ್ಮಾನ್, ಲಕ್ಷ್ಮಿ ಕೆ. ನಾಯರ್ ಉಪಸ್ಥಿತರಿದ್ದರು.
‘ಕರ್ನಾಟಕ ಕಲಾಶ್ರೀ’ ರಾಜಶ್ರೀ ಉಳ್ಳಾಲ್ ಬಳಗದಿಂದ ಭರತನಾಟ್ಯ ಪ್ರದರ್ಶಿಸಲಾಯಿತು. ನವಭಾರತ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ಎಂ. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢ ಶಾಲೆಯ ಮುಖ್ಯಶಿಕ್ಷಕ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿದರು.
ಮಾ.16ರಂದು ಸಂಜೆ 4ಕ್ಕೆ ನವಭಾರತ ರಾತ್ರಿ ಪ್ರೌಢಶಾಲೆಯ ೮೦ನೆ ವರ್ಧಂತ್ಯುತ್ಸವ ಹಾಗೂ ನವಭಾರತ ಯಕ್ಷಗಾನ ಅಕಾಡಮಿಯ ೯ನೆ ವಾರ್ಷಿಕ ಕಾರ್ಯಕ್ರಮ ವೈದ್ಯ ಡಾ. ಪಿ. ವಾಮನ್ ಶೆಣೈ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅತಿಥಿಯಾಗಿ ನಿಟ್ಟೆ ಡೀಮ್ಡ್ ವಿವಿಯ ಕುಲಾಧಿಪತಿ ಡಾ.ಎನ್. ವಿನಯ ಹೆಗ್ಡೆ, ಮಂಗಳೂರು ವಿವಿಯ ಕುಲಪತಿ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಭಾಗವಹಿಸಲಿದ್ದಾರೆ.







