ಸಾಹಿತ್ಯ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಸೊಕ್ಕಾಗಬಾರದು, ಶೋಧವಾಗಬೇಕು: ಡಾ. ಬರಗೂರು ರಾಮಚಂದ್ರಪ್ಪ
ಕಾ.ತ. ಚಿಕ್ಕಣ್ಣಗೆ ‘ಅತ್ಯುತ್ತಮ ಕಾದಂಬರಿ ಪ್ರಶಸ್ತಿ' ಪ್ರದಾನ

ಬೆಂಗಳೂರು, ಮಾ.14: ಸಾಹಿತ್ಯವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಸೊಕ್ಕಾಗಬಾರದು, ಶೋಧವಾಗಬೇಕು, ಸೊಕ್ಕು ಅಪಾಯಕರ, ಶೋಧ ಆರೋಗ್ಯಕರ ಎಂದು ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ವತಿಯಿಂದ ನಡೆದ 2022ರ ಅತ್ಯುತ್ತಮ ಕಾದಂಬರಿ ಸ್ಪರ್ಧೆಯಲ್ಲಿ ವಿಜೇತರಾದ ``ಪುರಾಣಕನ್ಯೆ’’ ಕಾದಂಬರಿಯ ಕರ್ತೃ ಕಾ.ತ.ಚಿಕ್ಕಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಹೆಚ್ಚಿನ ಅಕ್ಷರ ಜ್ಞಾನವಿಲ್ಲದವರ ಸಾಹಿತ್ಯ ಕೃತಿಗಳಿಗೆ ಮುನ್ನುಡಿ ಬರೆದಿದ್ದೇನೆಂಬುದು ನನಗೆ ಹೆಮ್ಮೆ. ಬರೆದದ್ದು ಪ್ರಕಟವಾಗದೆ ಹೋದರೆ ಅದು ಶ್ರೇಷ್ಠವೋ ಕನಿಷ್ಠವೋ ಹೇಗೆ ತಿಳಿಯುತ್ತದೆ. ಕಟು ವಿಮರ್ಶೆಗಳಿಂದ ಪ್ರತಿಭಾ ಭ್ರೂಣಹತ್ಯೆ ಸಲ್ಲದು ಸಾಹಿತ್ಯಕ್ಕೆ ಓದುಗ, ಸಂಗೀತಕ್ಕೆ ಕೇಳುಗ ಮತ್ತು ಸಿನಿಮಾಕ್ಕೆ ನೋಡುಗ ಮುಖ್ಯ ಎಂದರು.
ಕಾ.ತ.ಚಿಕ್ಕಣ್ಣ ಲೇಖಕರಾಗಿ ಹಾಗೂ ಆಡಳಿತಗಾರರಾಗಿ ಪ್ರಬುದ್ಧರು, ನನ್ನ ಗೆಳೆಯರೂ ಆದ ಈಪ್ರತಿಭಾವಂತರಿಗೆ ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ಸಾಲಿನ ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕಾದಂಬರಿ ವೈವಿಧ್ಯಮಯ ಪ್ರಕಾರ, ಓದುಗರ ಜೊತೆಗಾರ ಎಂದು ಗುರ್ತಿಸಿಕೊಂಡಿದೆ. ಸಾರ್ವಕಾಲಿಕ ಶ್ರೇಷ್ಠವಾದ ಎರಡು ಕಾದಂಬರಿಗಳು ಹಾಗೂ ಇತರ ಪ್ರಾಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ರಚಿಸಿದ ಕುವೆಂಪು ಅವರನ್ನು ಪೂರ್ವಾಗ್ರಹ ಪೀಡಿತ ವಿಮರ್ಶಕರು ಅವರು ಕವಿಯೇ ಅಲ್ಲ ಎಂದು ಗೇಲಿ ಮಾಡುತ್ತಿದ್ದರು. ಅವರಿಗೆ ಪ್ರಶಸ್ತಿಯ ಮೇಲೆ ಪ್ರಶಸ್ತಿಗಳು ಬಂದಾಗ, ಇದೇ ವಿಮರ್ಶಕರು ತಾರಾ ಮಾರಾ ಹೊಗಳಿದರು ಎಂದು ಅವರು ತಿಳಿಸಿದರು.
ಶಿಕ್ಷಣ ತಜ್ಞ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಮಹಾತ್ಮಗಾಂಧಿ ಅವರ ಕಲ್ಪನೆಯ ಸಮುದಾಯ ಸಮಾಜ ನಿರ್ಮಾಣ ಆಗಬೇಕಾಗಿದೆ. ಅದಕ್ಕಾಗಿ ಸಾಹಿತಿಗಳೆಲ್ಲರೂ ತಮ್ಮ ಬರವಣಿಗೆಯ ಮೂಲಕ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ.ಹನೀಫ್ ಮಾತನಾಡಿ, ಮಹಿಳೆಯರ ಗೌರವಾರ್ಥವಾಗಿ ಪ್ರತಿಷ್ಠಾನ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರಲ್ಲದೆ ಇತ್ತೀಚೆಗೆ ಮಹಿಳೆಯರ ಬಗೆಗೆ ಕೆಟ್ಟದಾಗಿ ನಡೆದುಕೊಂಡಿರುವ ಕ.ಸಾ.ಪ. ಅಧ್ಯಕ್ಷ ಹಾಗೂ ಕೋಲಾರದ ಲೋಕಸಭಾ ಸದಸ್ಯರ ವರ್ತನೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚ.ಹ.ರಘುನಾಥ್, ಪ್ರತಿಷ್ಠಾನದ ಕಾರ್ಯದರ್ಶಿ ಇ. ಬಸವರಾಜು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ, ಪ್ರತಿಷ್ಠಾನದ ಸದಸ್ಯರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಿ.ಬಿ.ರಾಮಯ್ಯ, ಕೆ.ಅಶೋಕ್, ಎಂ.ತಿಮ್ಮಯ್ಯ ಮತ್ತು ಬಿ.ಸಿ. ರಾಘವೇಂದ್ರ, ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ನೋಟಕಾರ್ ಸತೀಶ್, ಸಾಹಿತಿಗಳಾದ ಜಾಣಗೆರೆ ವೆಂಕಟರಾಮಯ್ಯ, ಸಿದ್ದಲಿಂಗಯ್ಯ ಬನ್ನಂಗಾಡಿ, ಡಾ. ಸತ್ಯಮಂಗಲ ಮಹದೇವ್, ಡಾ. ರಾಜಶೇಖರ ಹತಗುಂದಿ, ಕುವರ ಯಲ್ಲಪ್ಪ, ಡಾ. ಸಂತೋಷ ಹಾನಗಲ್, ವೀರಸಂಗಯ್ಯ, ವ.ಚ.ಚನ್ನೇಗೌಡ, ರಾಣಿ ಗೋವಿಂದರಾಜು, ಡಿ.ಎನ್. ಹರಿದಾಸ್, ಎನ್.ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
.jpeg)