ಸಾಲಿಹಾತ್ ‘ರಿಫ್ಲೆಕ್ಷನ್’ ಸ್ಮರಣಾ ಸಂಚಿಕೆ ಬಿಡುಗಡೆ

ಉಡುಪಿ : ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ವತಿ ಯಿಂದ ರಿಫ್ಲೆಕ್ಷನ್ ಸ್ಮರಣಾ ಸಂಚಿಕೆಯನ್ನು ಡಾ.ಗಣನಾಥ್ ಎಕ್ಕಾರು ಸಾಲಿಹಾತ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಶಿಕ್ಷಣ ಎಂಬುವುದು ವ್ಯಕ್ತಿಗೆ ಕಣ್ಣು ಇದ್ದಂತೆ ಅದು ಜೀವನಕ್ಕೆ ಮಾರ್ಗದರ್ಶನ ಮಾಡುತ್ತದೆ. ಶಿಕ್ಷಣದಿಂದ ಜ್ಞಾನಪ್ರಾಪ್ತಿ ಯಾಗುತ್ತದೆ. ಅದು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.
ವಿದ್ಯಾರ್ಥಿಗಳು ಕ್ರಿಯಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು. ಅದು ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅತೀ ಅಗತ್ಯ. ರಿಫ್ಲೆಕ್ಷನ್ ಎಂಬ ಸ್ಮರಣಾ ಸಂಚಿಕೆ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಇದು ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕತೆಗೆ ವೇದಿಕೆ ಕಲ್ಪಿಸುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ನಮ್ಮ ದೇಶದ ಸಂವಿಧಾನವನ್ನು ಅರ್ಥೈಸಿಕೊಂಡಲ್ಲಿ ಒಳ್ಳೆಯ ಜೀವನಕ್ಕೆ ನಾಂದಿ ಹಾಡುತ್ತದೆ. ಸಮಾನತೆಯ ಕುರಿತು ಅರಿವು ಮೂಡುತ್ತದೆ. ಸಾಮರಸ್ಯದ ಬದುಕು ನಮ್ಮದಾಗುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಚಿಂತಿಸ ಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ, ಅತೀಕುರ್ರೆಹಮಾನ್, ಮುಹಮ್ಮದೀಯ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಇಸ್ಮಾಯಿಲ್ ಸಾಹೇಬ್, ಡಾ.ಶಹನಾವಝ್, ಹೂಡೆ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, ಸ್ಮರಣಾ ಸಂಚಿಕೆಯ ಪ್ರಧಾನ ಸಂಪಾದಕ ಜಿ.ಎಂ.ಶರೀಫ್ ಮಾತನಾಡಿದರು.
ಈ ಸಂದರ್ಭದಲ್ಲಿ ರಿಫ್ಲೆಕ್ಷನ್ ಸ್ಮರಣಾ ಸಂಚಿಕೆಯ ಸಂಪಾದಕೀಯ ಮಂಡಳಿ ಯನ್ನು ಸನ್ಮಾನಿಸಲಾಯಿತು. ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಝಿಯಾ ಪ್ರಾರ್ಥನೆಗೈದರು. ಪಿಯುಸಿಯ ಪ್ರಾಂಶುಪಾಲೆ ದಿವ್ಯ ಪೈ ಸ್ವಾಗತಿಸಿದರು. ಜಿ.ಇಮ್ತಿಯಾಝ್ ವಂದಿಸಿದರು. ಶಿಕ್ಷಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.







