ಈಡಿ ವಿಚಾರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ BRS ನಾಯಕಿ ಕವಿತಾ

ಹೊಸದಿಲ್ಲಿ, ಮಾ. 15: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯವು ತನ್ನ ವಿಚಾರಣೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಭಾರತ ರಾಷ್ಟ್ರ ಸಮಿತಿ (BRS)ಯ ನಾಯಕಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಪುತ್ರಿ ಕೆ. ಕವಿತಾ ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯವು ತನಗೆ ಸಮನ್ಸ್ ನೀಡಿರುವುದನ್ನು ಕವಿತಾ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯ ಪೀಠವೊಂದು ವಿಧಾನ ಪರಿಷತ್ ಸದಸ್ಯೆಯೂ ಆಗಿರುವ ಕವಿತಾರ ಅರ್ಜಿಯನ್ನು ಮಾರ್ಚ್ 24ರಂದು ವಿಚಾರಣೆಗೆ ಎತ್ತಿಕೊಳ್ಳಲು ನಿರ್ಧರಿಸಿತು.
"ಅನುಷ್ಠಾನ ನಿರ್ದೇಶನಾಲಯದ ಕಚೇರಿಗೆ ಓರ್ವ ಮಹಿಳೆಯನ್ನು ಕರೆಸಬಹುದೇ?'' ಎಂದು ತುರ್ತು ವಿಚಾರಣೆಗಾಗಿ ಒತ್ತಾಯಿಸಿದ ಅವರ ವಕೀಲರು ಪ್ರಶ್ನಿಸಿದರು. "ಇದು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ'' ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ, ಮಾರ್ಚ್ 11ರಂದು ಅನುಷ್ಠಾನ ನಿರ್ದೇಶನಾಲಯವು ಬಿಆರ್‍ಎಸ್ ನಾಯಕಿಯನ್ನು ಗಂಟೆಗಳ ಕಾಲ ಪ್ರಶ್ನಿಸಿತ್ತು.
ಮಾರ್ಚ್ 16ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆಯು ಕವಿತಾರಿಗೆ ಸಮನ್ಸ್ ನೀಡಿದೆ.
ಇದೇ ಪ್ರಕರಣದಲ್ಲಿ, ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಈಗಾಗಲೇ ಇಡಿ ಕಸ್ಟಡಿಯಲ್ಲಿದ್ದಾರೆ.







