ಮಂಗಳೂರು: ಹೂಡಿಕೆ ನೆಪದಲ್ಲಿ ವಂಚನೆ ಆರೋಪ; ಪ್ರಕರಣ ದಾಖಲು

ಮಂಗಳೂರು, ಮಾ.15: ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿ, ಕ್ರಿಪ್ಟೋ ಆ್ಯಂಡ್ ಕರೆನ್ಸಿ ಎಂಬ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ಅಪರಿಚಿತನೊಬ್ಬ ವ್ಯಕ್ತಿಯೊಬ್ಬರಿಗೆ 1.24 ಕೋ.ರೂ.ಮೋಸ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸಕ್ಕೆ ಒಳಗಾದ ವ್ಯಕ್ತಿಯು ಕ್ರಿಪ್ಟೋ ಕರೆನ್ಸಿ ಬಗ್ಗೆ ಆಸಕ್ತಿ ಹೊಂದಿದ್ದರು. ಹಾಗಾಗಿ ಈ ವ್ಯಕ್ತಿಯು ಸಹೋದ್ಯೋಗಿ ಮೂಲಕ 2021ರ ಮಾರ್ಚ್‌ನಲ್ಲಿ ಕೇರಳದ ಜಿಜೊ ಜಾನ್ ಪುತ್ತೆನವೆಟಿಲ್ ಪರಿಚಯವಾಗಿದ್ದು, ಆತನ ತನ್ನನ್ನು ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆವಾಗ ಕೋವಿಡ್ ಸಮಯವಾದ್ದರಿಂದ ಮುಖತಃ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ಆತ ತನ್ನ ವಾಟ್ಸ್‌ಆ್ಯಪ್ ನಂಬರ್‌ನಿಂದ ಸಂದೇಶ ಕಳುಹಿಸಿ, ವಾಟ್ಸ್‌ಆ್ಯಪ್ ಕಾಲ್ ಮೂಲಕ ಕ್ರಿಪ್ಟೋ ಆ್ಯಂಡ್ ಕರೆನ್ಸಿಯ ಬಗ್ಗೆ ಮಾಹಿತಿ ನೀಡಿ ಹಣ ಹೂಡಿಕೆ ಮಾಡಲು ತಿಳಿಸಿದ್ದ. ಹೂಡಿಕೆ ಮಾಡಿದ ಹಣಕ್ಕೆ ಶೇ.10ರಷ್ಟು ಹಣವನ್ನು ಪ್ರತಿ ತಿಂಗಳು ಪಾವತಿಸುವುದಾಗಿ ಹೇಳಿದ್ದ. ಆತನ ಮಾತನ್ನು ನಂಬಿ ಮೊದಲಿಗೆ 2021ರ ಮಾ.23ರಿಂದ ಜೂ.1ರವರೆಗೆ ಹಂತ ಹಂತವಾಗಿ 41ಲಕ್ಷ ರೂ. ಐಎಂಪಿಎಸ್ ಮತ್ತು ನೆಫ್ಟ್ ಮೂಲಕ ಪಾವತಿಸಲಾಗಿತ್ತು. ಅಕ್ಟೋಬರ್‌ನಲ್ಲಿ ವಿವಿಧ ಬ್ಯಾಂಕ್‌ಗಳಿಂದ 67 ಲಕ್ಷ ರೂ. ಸಾಲ ಪಡೆದು, ಅ.22ರಿಂದ 26ರ ನಡುವೆ 60 ಲಕ್ಷ ರೂ. ಪಾವತಿಸಲಾಗಿತ್ತು. ಹೀಗೆ ಈ ರೀತಿಯಾಗಿ ಆರೋಪಿ, 1.24 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ಸೆಪ್ಟಂಬರ್‌ನಲ್ಲಿ 9 ಲಕ್ಷ ರೂ. ಮಾತ್ರ ಮರು ಪಾವತಿಸಿದ್ದಾನೆ ಎಂದು ತಿಳಿಸಿದ್ದಾರೆ.
ಹೂಡಿಕೆ ಮಾಡಿದ ಹಣ ಸಿಗಬಹುದೆಂದು ಕಾದು ಬಳಿಕ ಆರೋಪಿಯು ಯಾವುದೇ ದೂರವಾಣಿ ಕರೆ ಸ್ವೀಕರಿಸದ ಕಾರಣ ತಾನು ಮೋಸ ಹೋಗಿರುವುದು ಖಚಿತಗೊಂಡ ಬಳಿಕ ಸೆನ್ ಠಾಣೆಗೆ ದೂರು ನೀಡಿದ್ದಾರೆ.