ಕೇರಳ ವಿಧಾನಸಭೆಯಲ್ಲಿ ಪ್ರತಿಭಟನೆ: ಪ್ರತಿಪಕ್ಷ ಶಾಸಕರನ್ನು ಬಲವಂತದಿಂದ ಹೊರದಬ್ಬಿದ ಭದ್ರತಾ ಸಿಬ್ಬಂದಿ

ತಿರುವನಂತಪುರ,ಮಾ.15: ಬುಧವಾರ ಕೇರಳ ವಿಧಾನಸಭೆಯಲ್ಲಿ ಸ್ಪೀಕರ್ ಕಚೇರಿಯ ಹೊರಗೆ ಪ್ರತಿಪಕ್ಷಗಳ ಶಾಸಕರ ಪ್ರತಿಭಟನೆ ಸಂದರ್ಭದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಭದ್ರತಾ ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ಎತ್ತಿ ಕಟ್ಟಡದಿಂದ ಹೊರಹಾಕುತ್ತಿರುವ ಆಘಾತಕಾರಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮಣಿಯಲು ನಿರಾಕರಿಸಿ ಸ್ಪೀಕರ್ ಎ.ಎನ್.ಶಂಶೀರ್ ಅವರ ಕಚೇರಿಯ ಹೊರಗೆ ನೆಲದಲ್ಲಿಯೇ ಮಲಗಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರನ್ನು ಅಕ್ಷರಶಃ ಎತ್ತಿ ಸದನದಿಂದ ಹೊರಹಾಕಲಾಯಿತು.
ಸಂಘರ್ಷದಲ್ಲಿ ಶಾಸಕರಾದ ರೇಮಾ,ಎಕೆಎಂ ಅಷ್ರಫ್, ಟಿ.ವಿ.ಇಬ್ರಾಹಿಂ ಮತ್ತು ಸನೀಶ ಕುಮಾರ ಗಾಯಗೊಂಡಿದ್ದಾರೆ ಎಂದು ಸದನದಲ್ಲಿ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಪಕ್ಷದ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸದನದಲ್ಲಿ ನಿರಂತರವಾಗಿ ನಿರಾಕರಿಸಲಾಗುತ್ತಿದೆ. ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಇತ್ತೀಚಿನ ಕ್ರೂರ ಹಲ್ಲೆಯ ವಿಷಯವನ್ನು ನಿಲುವಳಿ ಸೂಚನೆಯನ್ನಾಗಿ ಮಂಡಿಸಲು ನಾವು ಪ್ರಯತ್ನಿಸಿದ್ದೆವು,ಆದರೆ ಅದರ ನೋಟಿಸನ್ನು ಸ್ಪೀಕರ್ ಯಾವುದೇ ಸಕಾರಣವಿಲ್ಲದೆ ನಿರಾಕರಿಸಿದ್ದಾರೆ ಎಂದು ಅವರು ಹೇಳಿದರು.
ಹಿರಿಯ ಶಾಸಕ ಹಾಗೂ ಮಾಜಿ ಗೃಹಸಚಿವ ಟಿ.ರಾಧಾಕೃಷ್ಣನ್‌ರನ್ನು ತಳ್ಳಲಾಗಿತ್ತು ಮತ್ತು ನಾಲ್ಕೈದು ಮಹಿಳಾ ಮಾರ್ಷಲ್‌ಗಳು ಶಾಸಕಿ ಕೆ.ಕೆ.ರೇಮಾ ಅವರ ಕೈಯನ್ನು ತಿರುಚಿದ್ದರು ಮತ್ತು ಅವರನ್ನು ನೆಲದಲ್ಲಿ ಎಳೆದೊಯ್ದಿದ್ದರು ಎಂದು ಪ್ರತಿಪಕ್ಷ ಶಾಸಕರು ಆರೋಪಿಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಒತ್ತಡದಡಿ ಸ್ಪೀಕರ್ ಪಕ್ಷಪಾತದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ಸತೀಶನ್,ಮುಖ್ಯಮಂತ್ರಿಗಳು ಪ್ರಶ್ನೆಗಳಿಗೆ ಹೆದರುತ್ತಿದ್ದಾರೆ ಮತ್ತು ಅಧಿವೇಶನವನ್ನು ಕ್ಷಿಪ್ರವಾಗಿ ಮುಗಿಸಲು ಬಯಸಿದ್ದಾರೆ ಎಂದು ಹೇಳಿದರು.
ಮಹಿಳೆಯರ ಸುರಕ್ಷತೆ ಕುರಿತು ಚರ್ಚಿಸಲು ನಿಲುವಳಿ ಸೂಚನೆ ತಿರಸ್ಕರಿಸಲ್ಪಟ್ಟ ಬಳಿಕ ಘೋಷಣೆಗಳನ್ನು ಕೂಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಶಾಸಕರು ಸದನದಿಂದ ಹೊರಕ್ಕೆ ತೆರಳಿ ಸ್ಪೀಕರ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು. ಕೊಚ್ಚಿ ಡಂಪ್‌ಯಾರ್ಡ್‌ನಲ್ಲಿ ಬೆಂಕಿ ಕುರಿತು ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಪೊಲೀಸ್ ಕ್ರಮದ ಚರ್ಚೆಗಾಗಿ ಮಂಗಳವಾರ ಸಲ್ಲಿಸಲಾಗಿದ್ದ ಇನ್ನೊಂದು ನಿಲುವಳಿ ಸೂಚನೆಯನ್ನೂ ಕೈಗೆತ್ತಿಕೊಳ್ಳಲು ಸ್ಪೀಕರ್ ನಿರಾಕರಿಸಿದ್ದರು.







