ಬೆಂಗಳೂರು-ಮೈಸೂರು ಹೈವೇಯಲ್ಲಿ ಟೋಲ್: ಆಕ್ಷೇಪಣೆ ಸಲ್ಲಿಸಲು ಎನ್‍ಎಚ್‍ಎಐಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಮಾ.15: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ National Highways Authority of India (ಎನ್‍ಎಚ್‍ಎಐ) ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.
ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಎಸ್.ಪಿ. ಸಂದೀಪ್ ರಾಜು ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ನಡೆಸಿತು. ಈ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಸಂಬಂಧ ಮಾ.14ರಂದು ನಡೆದಿದ್ದ ಧರಣಿ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಬೇಕಿದೆ ಎಂದು ನ್ಯಾಯಾಲಯವು ಹೇಳಿತು.
ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಶುಲ್ಕ(ದರ ಮತ್ತು ಸಂಗ್ರಹ ನಿರ್ಧಾರ) ನಿಯಮ 2008ರ ನಿಯಮ 3ರ ಅಡಿ ಅವಕಾಶವಿದೆ. ಇದಕ್ಕೂ ಮುನ್ನ, ಅಧಿಸೂಚನೆ ಪ್ರಕಟ ಸೇರಿದಂತೆ ಹಲವು ಪೂರ್ವಾಗತ್ಯಗಳನ್ನು ಪೂರೈಸಬೇಕು. ವಾಹನ ಸವಾರರಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈ ವಿಷಯವನ್ನು ಪರಿಗಣಿಸಬೇಕಿದೆ. ಈ ಸಂಬಂಧ ಎನ್‍ಎಚ್‍ಎಐ, ಅದರ ಯೋಜನಾ ನಿರ್ದೇಶಕ, ಯೋಜನೆ ಜಾರಿ ಘಟಕ ಮತ್ತು ಎನ್‍ಎಚ್‍ಎಐನ ಸಹಾಯಕ ಕಾರ್ಯಕಾರಿ ಎಂಜಿನಿಯರ್‍ಗಳು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿದೆ.
ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣ ಕೆಲಸದ ನಿರ್ಮಾಣ, ನಿಗಾ ಮತ್ತು ಮೇಲ್ವಿಚಾರಣೆ ನಡೆಸಲು ಹೈಕೋರ್ಟ್ ವಕೀಲ ಶಿವಪ್ರಸಾದ್ ಶಾಂತನಗೌಡರ್ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ (ಕೋರ್ಟ್ ಕಮಿಷನರ್) ನೇಮಕ ಮಾಡಿದೆ. ಮೂರು ವಾರಗಳಲ್ಲಿ ವರದಿ ಸಲ್ಲಿಸಲು ಕೋರ್ಟ್ ಕಮಿಷನರ್ ಒಪ್ಪಿದ್ದಾರೆ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.