ಇರಾನ್: ಬೆಂಕಿ ಹಬ್ಬ ಆಚರಣೆ ಸಂದರ್ಭ 11 ಮಂದಿ ಮೃತ್ಯು

ಟೆಹ್ರಾನ್, ಮಾ.15: ಇರಾನ್‍ನಲ್ಲಿ ಜನಪ್ರಿಯವಾಗಿರುವ ಬೆಂಕಿಹಬ್ಬ ಆಚರಣೆಯ ಸಂದರ್ಭ 11 ಮಂದಿ ಮೃತಪಟ್ಟಿದ್ದು 3,500ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಬುಧವಾರ ವರದಿ ಮಾಡಿದೆ.
ಪರ್ಷಿಯನ್ ಹೊಸ ವರ್ಷದ ಆರಂಭವನ್ನು ಸ್ವಾಗತಿಸುವ ಸಾಂಪ್ರದಾಯಿಕ ಬೆಂಕಿಹಬ್ಬವು ಪ್ರತೀ ವರ್ಷ ಇರಾನಿನ ಕ್ಯಾಲೆಂಡರ್ ವರ್ಷದ ಅಂತಿಮ ಮಂಗಳವಾರ ರಾತ್ರಿ ಆಚರಿಸಲಾಗುತ್ತದೆ.(ಇರಾನ್‍ನ ಕ್ಯಾಲೆಂಡರ್ ವರ್ಷ ಮಾರ್ಚ್ 20ರಂದು ಅಂತ್ಯಗೊಳ್ಳುತ್ತದೆ).
ಈ ಹಬ್ಬವು ಯುವಜನರಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಅಲ್ಲಲ್ಲಿ ತರಗೆಲೆ, ಕಸಕಡ್ಡಿಗಳನ್ನು ರಾಶಿಹಾಕಿ ಬೆಂಕಿ ಹಾಕುತ್ತಾರೆ. ಸೂರ್ಯಾಸ್ತಮಾನದ ಬಳಿಕ ಸಾಂಪ್ರದಾಯಿಕ ಹಾಡನ್ನು ಹಾಡುತ್ತಾ ಬೆಂಕಿಯ ಮೇಲಿಂದ ಆ ಕಡೆ ಹಾರಿದರೆ ತಮ್ಮನ್ನು ಶುದ್ಧೀಕರಿಸಿದಂತೆ ಮತ್ತು ದುಷ್ಟಶಕ್ತಿಗಳನ್ನು ದೂರವಿರಿಸಿದಂತೆ ಆಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ಫೆಬ್ರವರಿ 20ರಿಂದ ಬೆಂಕಿಹಬ್ಬಕ್ಕೆ ಸಂಬಂಧಿಸಿದ ದುರಂತದಲ್ಲಿ ಕನಿಷ್ಟ 26 ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್‍ನ ತುರ್ತು ಸೇವಾ ಘಟಕದ ಮುಖ್ಯಸ್ಥ ಜಾಫರ್ ಮಿಯಾದ್‍ಫರ್‍ರನ್ನು ಉಲ್ಲೇಖಿಸಿದ ವರದಿ ಹೇಳಿದೆ.





