ಪಶ್ಚಿಮದಂಡೆಯ ಹೆಸರು ಬದಲಿಸಿದ ಇಸ್ರೇಲ್ ಆಡಳಿತ ?: ಫೆಲೆಸ್ತೀನೀಯರ ಆತಂಕ

ರಮಲ್ಲಾ, ಮಾ.15: ವೆಸ್ಟ್‍ಬ್ಯಾಂಕ್(ಪಶ್ಚಿಮದಂಡೆ) ಪ್ರದೇಶವನ್ನು ಅಧಿಕೃತ ದಾಖಲೆಯಲ್ಲಿ `ಜುಡಿಯಾ ಮತ್ತು ಸಮರಿಯಾ' ಆಡಳಿತ ಎಂದು ಇಸ್ರೇಲ್ ಅಧಿಕಾರಿಗಳು ಉಲ್ಲೇಖಿಸಿರುವುದು ಈ ವಸಾಹತು ಪ್ರದೇಶವನ್ನು ಸದ್ದಿಲ್ಲದೆ ಸ್ವಾಧೀನಪಡಿಸುವ ಕ್ರಮವಾಗಿದೆ ಎಂದು ಫೆಲೆಸ್ತೀನೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್‍ನ ಹಣಕಾಸು ಸಚಿವ ಬೆಝಲೆಲ್ ಸ್ಮೊಟ್ರಿಚ್ ಅವರು ಅಧಿಕಾರಶಾಹಿ, ಆಡಳಿತಾತ್ಮಕ ಮತ್ತು ರಾಜಕೀಯ ಅಡೆತಡೆಗಳನ್ನು ಉಪೇಕ್ಷಿಸುವ ಮೂಲಕ ಹಾಗೂ ಬಾಹ್ಯ ಒತ್ತಡವನ್ನು ನಿರ್ಲಕ್ಷಿಸಿ ಪಶ್ಚಿಮದಂಡೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಇಸ್ರೇಲ್ ವ್ಯವಹಾರಕ್ಕೆ ಸಂಬಂಧಿಸಿದ ಫೆಲೆಸ್ತೀನ್‍ನ ತಜ್ಞ ಇಸ್ಮತ್ ಮನ್ಸೂರ್ ಹೇಳಿದ್ದಾರೆ.
ಇಸ್ರೇಲ್ ಪಶ್ಚಿಮದಂಡೆಯನ್ನು ಸ್ವಾಧೀನಕ್ಕೆ ಪಡೆದರೆ ಅಲ್ಲಿರುವ 3 ದಶಲಕ್ಷ ಫೆಲೆಸ್ತೀನೀಯರ ಬದುಕಿನ ಮೇಲೆ ಪರಿಣಾಮ ಆಗದಿರಲೂಬಹುದು. ಆದರೆ ಇದು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಫೆಲೆಸ್ತೀನ್ ಅಥಾರಿಟಿ(ಪಿಎ)ಯ ಮೇಲೆ ಪರಿಣಾಮಕ್ಕೆ ಕಾರಣವಾಗಲಿದೆ. ಪಿಎ ಎರಡು ರಾಷ್ಟ್ರ ಪರಿಹಾರಕ್ಕೆ ಆಗ್ರಹಿಸುತ್ತಿರುವ ನಡುವೆಯೇ, ಈ ಸ್ವಾಧೀನ ಪ್ರಕ್ರಿಯೆಯು ಪಶ್ಚಿಮದಂಡೆಯನ್ನು ಸಂಧಾನ ಮಾತುಕತೆಯ ವ್ಯಾಪ್ತಿಯಿಂದ ಹೊರಗಿಡುತ್ತದೆ ಮತ್ತು ಈ ವಿಷಯವನ್ನು ಇಸ್ರೇಲ್ ಕಾನೂನಿನ ವ್ಯಾಪ್ತಿಯಡಿಗೆ ತರಲಿದೆ ಎಂದು ಮನ್ಸೂರ್ ಹೇಳಿದ್ದಾರೆ.
ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ 6,50,000ಕ್ಕೂ ಅಧಿಕ ಇಸ್ರೇಲ್ ವಸಾಹತುಗಾರರು ನೆಲೆಸಿದ್ದರೆ ಪಶ್ಚಿಮದಂಡೆಯ 60%ದಷ್ಟು ವ್ಯಾಪ್ತಿಯಲ್ಲಿರುವ `ಏರಿಯಾ ಸಿ' ಪ್ರದೇಶದಲ್ಲಿ ಸುಮಾರು 3 ಲಕ್ಷ ಫೆಲೆಸ್ತೀನೀಯರು ನೆಲೆಸಿದ್ದಾರೆ. ಪಶ್ಚಿಮ ದಂಡೆಯ ಬಗ್ಗೆ ಉಲ್ಲೇಖಿಸುವಾಗ ಇಸ್ರೇಲ್‍ನ ಮಿಲಿಟರಿ ಅಧಿಕಾರಿಗಳು ಕಳೆದ 55 ವರ್ಷದಿಂದ `ಜುಡಿಯಾ ಮತ್ತು ಸಮರಿಯಾ ಗವರ್ನರೇಟ್' ಎಂಬ ಮಿಲಿಟರಿ ಪದವನ್ನು ಬಳಸುತ್ತಿದ್ದಾರೆ.
ಆದರೆ ಇದೀಗ ಪೆಲೆಸ್ತೀನ್ ನಗರಗಳ ಮಧ್ಯೆ ಸಂಚರಿಸುವ ವಾಹನಗಳಿಗೆ ಇಸ್ರೇಲ್‍ನ ಟ್ರಾಫಿಕ್ ಪೊಲೀಸರು ನೀಡುವ ರಶೀದಿಯಲ್ಲಿ `ಜುಡಿಯಾ ಮತ್ತು ಸಮಾರಿಯ ಗವರ್ನರೇಟ್'ನ ಲಾಂಛನ ಪ್ರತ್ಯಕ್ಷವಾಗಿದೆ ಮತ್ತು ಹಲವು ರಸ್ತೆಗಳು, ಪ್ರದೇಶಗಳ ಹೆಸರನ್ನೂ ಬದಲಾಯಿಸಲಾಗಿದೆ ಎಂದು ಫೆಲೆಸ್ತೀನ್ ಚಾಲಕರು ಹೇಳಿದ್ದಾರೆ. ಇದೀಗ `ಏರಿಯಾ ಸಿ'ಯನ್ನು ಇಸ್ರೇಲ್ ವಸಾಹತು ಪ್ರದೇಶದ ವ್ಯಾಪ್ತಿಗೆ ಸೇರ್ಪಡೆಗೊಳಿಸುವುದು ಸಚಿವ ಬೆಝಲೆಲ್ ಸ್ಮೊಟ್ರಿಚ್ ಅವರ ಉದ್ದೇಶವಾಗಿದೆ.
ಪಶ್ಚಿಮದಂಡೆಯಲ್ಲಿನ ಇಸ್ರೇಲ್ ವಸಾಹತುಗಾರರ ಜೀವನಮಟ್ಟವನ್ನು ಸುಧಾರಿಸಿ, ಟೆಲ್‍ಅವೀವ್‍ನಲ್ಲಿರುವ ಇಸ್ರೇಲಿ ಪ್ರಜೆಗಳ ಮಟ್ಟಕ್ಕೆ ಏರಿಸುವುದು ಅವರ ಯೋಜನೆಯಾಗಿದೆ. ಸ್ಮೊಟ್ರಿಚ್ ನಾಗರಿಕ ಆಡಳಿತದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವುದು ಅವರಿಗೆ ಪಶ್ಚಿಮದಂಡೆಯಲ್ಲಿನ ಇಸ್ರೇಲಿ ವಸಾಹತುಗಾರರಿಗೆ ಸಂಬಂಧಿಸಿದ ಹೆಚ್ಚಿನ ಅಧಿಕಾರವನ್ನು ಒದಗಿಸಿದೆ ಎಂದು ಇಸ್ಮತ್ ಮನ್ಸೂರ್ ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ, ಇಸ್ರೇಲ್ ಸಂಸತ್ತು ಮಂಗಳವಾರ `ಪ್ರತ್ಯೇಕತೆ/ಹಿಂದೆಗೆದುಕೊಳ್ಳುವಿಕೆ' (ಉತ್ತರ ಪಶ್ಚಿಮದಂಡೆಯ ವಸಾಹತುಗಳಿಂದ ಹಿಂದಕ್ಕೆ ಬರುವುದು) ಕಾನೂನನ್ನು ರದ್ದುಗೊಳಿಸುವ ಮಸೂದೆಯನ್ನು ಅನುಮೋದಿಸಿದೆ. ಮಸೂದೆಯ ಪ್ರಕಾರ, ತೆರವುಗೊಂಡ ಉತ್ತರ ಪಶ್ಚಿಮದಂಡೆಯ ವಸಾಹತು ಪ್ರದೇಶಗಳಿಗೆ ವಲಸೆಗಾರರು ಪ್ರವೇಶಿಸುವ ಮತ್ತು ಅಲ್ಲಿ ಉಳಿದುಕೊಳ್ಳುವುದರ ಮೇಲಿರುವ ನಿಷೇಧವನ್ನು ತೆಗೆದುಹಾಕಲಾಗುತ್ತದೆ.
ಜತೆಗೆ, ನಬ್ಲೂಸ್‍ನಿಂದ ಜೆನಿನ್ ನಗರದ ನಡುವಿನ ಪ್ರದೇಶಗಳನ್ನು ಪ್ರವೇಶಿಸುವುದಕ್ಕೆ ಇದ್ದ ನಿಷೇಧ ರದ್ದಾಗಲಿದೆ. ಇದೀಗ, ಇಸ್ರೇಲ್‍ನ ಸ್ವಾಧೀನ ಕ್ರಮಗಳನ್ನು ವಿರೋಧಿಸಿ ಮಾರ್ಚ್ 30ರಂದು ಪ್ರತಿಭಟನೆ ನಡೆಸಲು ಇಸ್ರೇಲ್‍ನಲ್ಲಿರುವ ಮತ್ತು ಪಶ್ಚಿಮ ದಂಡೆಯಲ್ಲಿ ನೆಲೆಸಿರುವ ಫೆಲೆಸ್ತೀನೀಯರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.