ಮಹಿಳೆಯರ ಪ್ರೀಮಿಯರ್ ಲೀಗ್: ಕೊನೆಗೂ ಗೆಲುವಿನ ನಗೆ ಬೀರಿದ ಆರ್‌ಸಿಬಿ

ನವಿ ಮುಂಬೈ, ಮಾ.15: ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲುಪಿಎಲ್) ನಲ್ಲಿ ಬುಧವಾರ ನಡೆದ 15ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡ ಕೊನೆಗೂ ಗೆಲುವಿನ ಮುಖ ಕಂಡಿದೆ.
ಆರ್‌ಸಿಬಿ ಟೂರ್ನಿಯಲ್ಲಿ ತಾನಾಡಿದ ಆರನೇ ಪಂದ್ಯದಲ್ಲಿ ಮೊದಲ ಗೆಲುವನ್ನು ದಾಖಲಿಸಿದೆ.
ಗೆಲ್ಲಲು 136 ರನ್ ಗುರಿ ಪಡೆದ ಆರ್‌ಸಿಬಿ ತಂಡ ನಾಯಕಿ ಸ್ಮತಿ ಮಂಧಾನ(0), ಸೋಫಿ ಡಿವೈನ್(14), ಎಲ್ಲಿಸ್ ಪೆರ್ರಿ(10) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಕನಿಕಾ ಅಹುಜಾ(46 ರನ್,30 ಎಸೆತ,8 ಬೌಂಡರಿ,1 ಸಿಕ್ಸರ್)ಹಾಗೂ ರಿಚಾ ಘೋಷ್(ಔಟಾಗದೆ 31 ರನ್, 32 ಎಸೆತ, 3 ಬೌಂಡರಿ, 1 ಸಿಕ್ಸರ್) 5ನೇ ವಿಕೆಟಿಗೆ 60 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ಖಚಿತಪಡಿಸಿದರು. ರಿಚಾ ಘೋಷ್ ಔಟಾಗದೆ ಉಳಿದು ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲು ನೆರವಾದರು.
ಇದಕ್ಕೂ ಮೊದಲು ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮತಿ ಮಂಧಾನ ಯುಪಿ ವಾರಿಯರ್ಸ್ ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಯುಪಿ ತಂಡ ಗ್ರೆಸ್ ಹ್ಯಾರಿಸ್(46 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್)ಏಕಾಂಗಿ ಹೋರಾಟದ ಹೊರತಾಗಿಯೂ 19.3 ಓವರ್‌ಗಳಲ್ಲಿ ಕೇವಲ 135 ರನ್‌ಗೆ ಆಲೌಟಾಯಿತು.
ಕಿರಣ್ ನವ್‌ಗೈರ್(22 ರನ್) ಹಾಗೂ ದೀಪ್ತಿ ಶರ್ಮಾ(22 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ಆರ್‌ಸಿಬಿ ಪರ ಎಲ್ಲಿಸ್ ಪೆರ್ರಿ(3-16), ಸೋಫಿ ಡಿವೈನ್(2-23) ಹಾಗೂ ಎಸ್. ಆಶಾ(2-27)ಏಳು ವಿಕೆಟ್‌ಗಳನ್ನು ಹಂಚಿಕೊಂಡರು.