ಆಯ್ದ ಕ್ಷೇತ್ರಗಳಲ್ಲಿ ಕಾನೂನು ಪ್ರಾಕ್ಟೀಸ್ ನಡೆಸಲು ವಿದೇಶಿ ವಕೀಲರು,ಸಂಸ್ಥೆಗಳಿಗೆ ಬಿಸಿಐ ಅನುಮತಿ

ಹೊಸದಿಲ್ಲಿ,ಮಾ.15: ಮಹತ್ವದ ಬೆಳವಣಿಗೆಯೊಂದರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ವಿದೇಶಿ ಕಾನೂನು,ಅಂತರರಾಷ್ಟ್ರೀಯ ಕಾನೂನು ಸಮಸ್ಯೆಗಳು ಮತ್ತು ಮಧ್ಯಸ್ಥಿಕೆ ವಿಷಯಗಳಂತಹ ಆಯ್ದ ಕ್ಷೇತ್ರಗಳಲ್ಲಿ ಕಾನೂನು ಪ್ರಾಕ್ಟೀಸ್ ನಡೆಸಲು ವಿದೇಶಿ ವಕೀಲರು ಮತ್ತು ಸಂಸ್ಥೆಗಳಿಗೆ ಅನುಮತಿ ನೀಡಲು ನಿರ್ಧರಿಸಿದೆ. ಇದು ಭಾರತದ ಮತ್ತು ವಿದೇಶಗಳ ವಕೀಲರಿಗೆ ಪರಸ್ಪರ ಪ್ರಯೋಜನಕಾರಿಯಾಗಲಿದೆ ಎಂದು ಅದು ಹೇಳಿದೆ.
ಬಿಸಿಐ ಇದಕ್ಕಾಗಿ ಭಾರತದಲ್ಲಿ ವಿದೇಶಿ ವಕೀಲರು ಮತ್ತು ವಿದೇಶಿ ಕಾನೂನು ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳು,2022ನ್ನು ಅಧಿಸೂಚಿಸಿದೆ.
ವಿದೇಶಿ ಕಾನೂನು,ವ್ಯಾಜ್ಯೇತರ ವಿಷಯಗಳಲ್ಲಿ ವಿವಿಧ ಅಂತರರಾಷ್ಟ್ರೀಯ ಕಾನೂನು ಸಮಸ್ಯೆಗಳು ಹಾಗೂ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ವಿಷಯಗಳಲ್ಲಿ ವಕಾಲತ್ ನಡೆಸಲು ವಿದೇಶಿ ವಕೀಲರಿಗೆ ಅವಕಾಶ ನೀಡುವುದರಿಂದ ದೀರ್ಘಾವಧಿಯಲ್ಲಿ ಭಾರತದಲ್ಲಿಯ ವಕೀಲರಿಗೂ ಪ್ರಯೋಜನವಾಗುವಂತೆ ಕಾನೂನು ವೃತ್ತಿಯ ಬೆಳವಣಿಗೆಗೆ ನೆರವಾಗಲಿದೆ ಎಂದು ಅಧಿಸೂಚಿತ ನಿಯಮಗಳ ಉದ್ದೇಶಗಳಲ್ಲಿ ಹೇಳಲಾಗಿದೆ.
ಈ ಕ್ರಮವು ಭಾರತದ ಮತ್ತು ವಿದೇಶಗಳ ವಕೀಲರಿಗೆ ಪರಸ್ಪರ ಪ್ರಯೋಜನಕಾರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ವಿದೇಶಿ ವಕೀಲರಿಗೆ ನಿರ್ಬಂಧಿತ ಮತ್ತು ನಿಯಂತ್ರಿತ ರೀತಿಯಲ್ಲಿ ಕಾನೂನು ಪ್ರಾಕ್ಟೀಸ್ ಮಾಡಲು ಅವಕಾಶ ನೀಡಲಾಗುವುದುಎಂದು ಬಿಸಿಐ ತಿಳಿಸಿದೆ.







