ಬೆಂಗಳೂರು: ಮಾರ್ಚ್ 20ಕ್ಕೆ ಮುಷ್ಕರಕ್ಕೆ ಕರೆ ನಿಡಿದ ಆಟೋ ಚಾಲಕರು, ಸೇವೆ ಸ್ಥಗಿತ
ಬೆಂಗಳೂರು, ಮಾ.15: ಅಕ್ರಮ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಇಂದಿನಿಂದ (ಮಾ.15) ನಗರದ ಎಲ್ಲ ಆಟೋಗಳಿಗೆ ಕಪ್ಪು ಬಾವುಟ ಕಟ್ಟಿಕೊಂಡು ಪ್ರತಿಭಟನೆ ಮಾಡಲಾಗುತ್ತದೆ. ಆದರೂ ಸರಕಾರ ಕ್ರಮವನ್ನು ಕೈಗೊಳ್ಳದಿದ್ದರೆ, ಮಾ.20ರಂದು ಮುಷ್ಕರ ನಡೆಸಲಾಗುತ್ತದೆ ಎಂದು ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಸಿಐಟಿಯುನ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್‍ನ ಅಧ್ಯಕ್ಷ ಸಿ.ಎನ್. ಶ್ರೀನಿವಾಸ್ ಮಾತನಾಡಿ, ಸಾರಿಗೆ ಇಲಾಖೆ ರ್ಯಾಪಿಡೊ, ಓಲಾ, ಊಬರ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಈ ಮೂಲಕ ಆಟೋ ಚಾಲಕರ ಆದಾಯ ಕಿತ್ತುಕೊಳ್ಳುತ್ತಿದೆ. ಸಾರಿಗೆ ಸಚಿವ ಶ್ರೀರಾಮುಲು ಈ ಕುರಿತು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.
ವೈಟ್ ಬೋರ್ಡ್‍ನಲ್ಲಿ ರ್ಯಾಪಿಡೊ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವುದನ್ನ ಸರ್ಕಾರ ವಾಪಾಸ್ ಪಡೆಯಬೇಕು. ಇಲ್ಲವಾದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವಂತೆ ಆಟೋ ಚಾಲಕರಿಗೆ ಕರೆ ನೀಡಬೇಕಾಗಿರುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ರಘು ನಾರಾಯಣ್ ಗೌಡ, ಎನ್. ಮಾಯಲಗು, ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.