ಕೊಲಂಬಿಯ: ಕಲ್ಲಿದ್ದಲ ಗಣಿಯಲ್ಲಿ ಸ್ಫೋಟ; 11 ಮಂದಿ ಮೃತ್ಯು

ಬೊಗೊಟ, ಮಾ.15: ಮಧ್ಯ ಕೊಲಂಬಿಯಾದ ಕಲ್ಲಿದ್ದಲ ಗಣಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 11 ಮಂದಿ ಮೃತಪಟ್ಟಿದ್ದಾರೆ. ಗಣಿಯೊಳಗೆ ಇನ್ನೂ 10 ಮಂದಿ ಸಿಕ್ಕಿಬಿದ್ದಿದ್ದು ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಗವರ್ನರ್‍ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ರಾಜಧಾನಿ ಬೊಗೊಟದಿಂದ ಉತ್ತರಕ್ಕೆ ಸುಮಾರು 74 ಕಿ.ಮೀ ದೂರದಲ್ಲಿರುವ ಸುತಾತವುಸ ನಗರದಲ್ಲಿನ ಕಲ್ಲಿದ್ದಲ ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಸುಮಾರು 3 ಸಾವಿರ ಅಡಿ ಆಳದಲ್ಲಿ ಗಣಿಗಾರಿಕೆ ನಡೆಯುತ್ತಿದ್ದಾಗ ಸ್ಥಳದಲ್ಲಿ ಅನಿಲ ಶೇಖರಣೆಗೊಂಡಿದ್ದು ಆಗ ಆಕಸ್ಮಿಕವಾಗಿ ಬೆಂಕಿಯ ಕಿಡಿ ಸಿಡಿದು ಸ್ಫೋಟ ಸಂಭವಿಸಿದೆ. 11 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು 7 ಮಂದಿ ಗಾಯವಿಲ್ಲದೆ ಪಾರಾಗಿದ್ದಾರೆ. ಗಣಿಯ ಆಳದಲ್ಲಿ ಸಿಲುಕಿಕೊಂಡವರಲ್ಲಿ ಇಬ್ಬರನ್ನು ಬುಧವಾರ ಸಂಜೆಯ ವೇಳೆಗೆ ರಕ್ಷಿಸಲಾಗಿದೆ. ಉಳಿದವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.
ಇದೊಂದು ಘೋರ ದುರಂತವಾಗಿದೆ. ಗಣಿಯಲ್ಲಿ ಸಿಕ್ಕಿಕೊಂಡವರ ರಕ್ಷಣೆಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಡೆಸಲಾಗುವುದು ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೊ ಟ್ವೀಟ್ ಮಾಡಿದ್ದಾರೆ.