ಮಂಗಳೂರು: ನವಭಾರತ ರಾತ್ರಿ ಪ್ರೌಢಶಾಲೆಯ 80ನೆ ವರ್ಧಂತ್ಯುತ್ಸವ ಕಾರ್ಯಕ್ರಮ

ಮಂಗಳೂರು, ಮಾ.16: ನಗರದ ರಥಬೀದಿಯ ನವಭಾರತ ಎಜುಕೇಶನ್ ಸೊಸೈಟಿ (ರಿ)-ನವಭಾರತ ರಾತ್ರಿ ಪ್ರೌಢಶಾಲೆಯ 80ನೆ ವರ್ಧಂತ್ಯುತ್ಸವ ಮತ್ತು ನವಭಾರತ ಯಕ್ಷಗಾನ ಅಕಾಡಮಿಯ 9ನೆ ವಾರ್ಷಿಕ ಕಾರ್ಯಕ್ರಮವು ಗುರುವಾರ ನಗರದ ಪುರಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ‘ಕಲಿಕೆಯು ಜೀವನ ಪರ್ಯಂತದ ಪ್ರಕ್ರಿಯೆಯಾಗಿದೆ. 80 ವರ್ಷದ ಹಿಂದೆಯೇ ಶಿಕ್ಷಣದ ಮಹತ್ವವನ್ನು ಮನಗಂಡಿದ್ದ ಶಿಕ್ಷಕ ಖಾಲಿದ್ ಮುಹಮ್ಮದ್ ಅವರು ರಾತ್ರಿ ಶಾಲೆಯನ್ನು ಆರಂಭಿಸಿರುವುದು ದೊಡ್ಡ ಮಟ್ಟದ ಸಾಧನೆಯಾಗಿದೆ. ಎಲ್ಲರನ್ನು ಒಳಗೊಂಡು ಬದುಕಬೇಕು, ಸಮಾಜದ ಸೇವೆ ಮಾಡಬೇಕು, ಜನರ ಕಣ್ಣಿರು ಒರೆಸಬೇಕು, ಮಾನವ ಧರ್ಮವೇ ಮುಖ್ಯವಾಗಬೇಕು ಎಂಬುದು ಸಂಸ್ಥಾಪಕರಾಗಿದ್ದ ಖಾಲಿದ್ ಮುಹಮ್ಮದ್‌ರ ಆಶಯವಾಗಿತ್ತು. ಕರ್ತವ್ಯದ ಜೊತೆ ಸೇವೆ ಮತ್ತು ಸೇವೆಯೊಂದಿಗೆ ಪ್ರೀತಿ, ವಿಶ್ವಾಸವೂ ಮುಖ್ಯ ಎಂಬುದನ್ನು ಸಂಸ್ಥಾಪಕರು ಅಂದು ಮನಗಂಡಿದ್ದರಿಂದಲೇ ನಾವು ಇಂದು ಅವರ ಜನ್ಮ ಶತಾಬ್ಧಿಯ ಮೂಲಕ ನೆನಪಿಸಲು ಸಾಧ್ಯವಾಗಿದೆ’ ಎಂದರು.
‘ಸಂಸ್ಥಾಪಕ ಖಾಲಿದ್ ಮುಹಮ್ಮದ್‌ರ ಜೊತೆಗಿನ ಒಡನಾಟವನ್ನು ಸೊಸೈಟಿಯ ಕಾರ್ಯದರ್ಶಿ ರಾಮಚಂದ್ರರು ಮೆಲುಕು ಹಾಕುವಾಗ ನನಗೆ ನನ್ನ ಬಾಲ್ಯದ ದಿನಗಳು ನೆನಪಿಗೆ ಬಂತು. ನಮ್ಮದು ಅರ್ಚಕ, ಸಂಪ್ರದಾಯಸ್ಥ ಕುಟುಂಬ. ನಮ್ಮ ಮತ್ತು ಮಠ ಇಸುಬು ಅವರ ಸಂಬಂಧವು ಅನ್ಯೋನ್ಯವಾಗಿತ್ತು. ಅಂದಿನ ಆ ಪ್ರೀತಿ, ಸೌಹಾರ್ದ, ಸಾಮಾಜಿಕ ಸಾಮರಸ್ಯವನ್ನು ನಾವೆಲ್ಲ ಮುಂದುವರಿಸಿಕೊಂಡು ಹೋಗಬೇಕಿದೆ’ ಎಂದು ಕುಲಪತಿ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ನವಭಾರತ ರಾತ್ರಿ ಪ್ರೌಢಶಾಲೆಯ ಸಂಸ್ಥಾಪಕ ದಿ. ಹಾಜಿ ಖಾಲಿದ್ ಮುಹಮ್ಮದ್‌ರ ದೀರ್ಘಕಾಲದ ಒಡನಾಡಿಯಾಗಿದ್ದ ಮತ್ತು ನವಭಾರತ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯೂ ಆಗಿರುವ 86ರ ಹರೆಯದ ಎಂ. ರಾಮಚಂದ್ರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನವಭಾರತ ಎಜುಕೇಶನ್ ಸೊಸೈಟಿಯ ಕೋಶಾಧಿಕಾರಿ ಮಧುಸೂಧನ್ ಆಯರ್ ಸನ್ಮಾನ ಪತ್ರ ವಾಚಿಸಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಎಂ. ರಾಮಚಂದ್ರ ‘ರಾತ್ರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ, ಹಳೆ ವಿದ್ಯಾರ್ಥಿಯಾಗಿ, ಶಿಕ್ಷಕನಾಗಿ ನಾನು ನನ್ನ ಕರ್ತವ್ಯವನ್ನು ನಿಭಾಯಿಸಿದ್ದೆ. ನನ್ನ ಗುರುಗಳಾದ ಖಾಲಿದ್ ಮುಹಮ್ಮದ್ ಮತ್ತವರ ಕುಟುಂಬಸ್ಥರು ನನ್ನ ಮೇಲೆ ತೋರಿದ್ದ ಪ್ರೀತಿ, ವಿಶ್ವಾಸವು ನನ್ನನ್ನು ಈ ಎಲ್ಲಾ ಕೆಲಸಗಳಿಗೆ ಪ್ರೇರೇಪಿಸಿದೆ. ಹಾಗಾಗಿ ಅದನ್ನು ಸೇವೆ ಎನ್ನಲು ಸಾಧ್ಯವಿಲ್ಲ. ಈ ಸನ್ಮಾನಕ್ಕೆ ನನ್ನ ಮನಸ್ಸು ಒಪ್ಪದಿದ್ದರೂ ಗುರು ಹಿರಿಯರ, ವಿದ್ಯಾವಂತರ, ಪ್ರಜ್ಞಾವಂತರ ಮನಸ್ಸು ನೋವಿಸಬಾರದೆಂಬ ನಿಟ್ಟಿನಲ್ಲಿ ಸನ್ಮಾನ ಸ್ವೀಕರಿಸಿದೆ’ ಎಂದರು.
ನವಭಾರತ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಪಿ.ವಿ.ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸೊಸೈಟಿಯ ಜೊತೆ ಕಾರ್ಯದರ್ಶಿ ಆನಂದ ಕೆ. ಸುವರ್ಣ, ಲಕ್ಷ್ಮಿ ಕೆ. ನಾಯರ್ ಹಾಗೂ ಖಾಲಿದ್ ಮುಹಮ್ಮದ್‌ರ ಪುತ್ರ ಫಕ್ರುದ್ದೀನ್ ಅಲಿ ಉಪಸ್ಥಿತರಿದ್ದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿದರು.
ವರ್ಧಂತ್ಯುತ್ಸವದ ಪ್ರಯುಕ್ತ ‘ಏಕ್ ಶ್ಯಾಮ್ ರಫಿ ಕೆ ನಾಮ್‘ ಸಂಗೀತ ರಸಮಂಜರಿ ಹಾಗೂ ‘ಶ್ರೀ ಕೃಷ್ಣ ಕಾರುಣ್ಯ’ ಯಕ್ಷಗಾನ ಬಯಲಾಟ ನಡೆಯಿತು.
