ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿ: ಸರಕಾರಕ್ಕೆ ಶ್ರೀವಿಶ್ವ ಸಂತೋಷ ಗುರೂಜಿ ಆಗ್ರಹ

ಬಾರಕೂರು : ಬಂಟರು ಯಾನೆ ನಾಡವರು ತಮ್ಮದೇ ಆದ ವಿಶೇಷ ಪರಂಪರೆಯನ್ನು ಹೊಂದಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ವಾಸಿಸುತಿದ್ದಾರೆ. ಈಗ ಜಗತ್ತಿನಾದ್ಯಂತ ವ್ಯಾಪಿಸಿದ್ದಾರೆ. ಆದರೆ ಸರಕಾರ ಬಜೆಟ್‌ನಲ್ಲಿ ಆಗಲಿ, ಇನ್ನಿತರ ರೂಪದಲ್ಲಿ ಆಗಲಿ ಈ ಸಮುದಾಯ ಕ್ಕೆ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಆದ್ದರಿಂದ ಇನ್ನಾದರೂ ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಶ್ರೀಬಾರಕೂರು ಮಹಾಸಂಸ್ಥಾನದ ವಿಶ್ವಸ್ಥ ಮಂಡಳಿಯ ಗುರುಗಳಾದ ಶ್ರೀವಿಶ್ವ ಸಂತೋಷ ಭಾರತಿ ಗುರೂಜಿ ಆಗ್ರಹಿಸಿದ್ದಾರೆ.
ಬಾರಕೂರಿನ ತಮ್ಮ ಸಂಸ್ಥಾನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಇತ್ತೀಚೆಗೆ ಪ್ರತಿಯೊಂದು ಜಾತಿ ಮತ್ತು ಸಮುದಾಯಕ್ಕೆ ಅಭಿವೃದ್ಧಿ ನಿಗಮವನ್ನು ಘೋಷಿಸುತ್ತಿದೆ. ಕೆಲವರು ಹೋರಾಟದ ಮೂಲಕವೂ ಪಡೆದುಕೊಂಡಿದ್ದಾರೆ. ರಾಜ್ಯದ ಪ್ರತಿಯೊಂದು ಸಮಾಜವೂ ಅಭಿವೃದ್ಧಿಯ ಚಿಂತನೆ ನಡೆಸುತ್ತಿರುವಂತೆ, ಇದೀಗ ಬಂಟರು ಯಾನೆ ನಾಡವರೂ ಸಹ ತಮ್ಮ ಸಮಾಜಕ್ಕೊಂದು ಅಭಿವೃದ್ಧಿ ನಿಗಮವನ್ನು ಬಯಸಿದರೆ ತಪ್ಪಿಲ್ಲ ಎಂದು ಸ್ವಾಮೀಜಿ ತಿಳಿಸಿದರು.
2ಎಗೆ ಸೇರಿಸಿ: ನಮ್ಮ ಸಮಾಜದ ನಾಡವರನ್ನು 2ಎ ಗುಂಪಿನಲ್ಲೂ, ಬಂಟರನ್ನು ೩ಎ ಗುಂಪಿನಲ್ಲೂ, ನಾಡವ ಒಕ್ಕಲಿಗರನ್ನು ೩ಎ ಗುಂಪಿನಲ್ಲೂ ಅಸಂಬದ್ಧವಾಗಿ ವರ್ಗೀಕರಿಸಲಾಗಿದೆ. ಈ ಎಲ್ಲರನ್ನೂ ಸಮೀಕರಿಸಿದ ಇಡೀ ಸಮಾಜವನ್ನು ಮೀಸಲಾತಿಯಲ್ಲಿ ೨ಎ ಗುಂಪಿಗೆ ಸೇರಿಸಬೇಕೆಂಬುದು ಸಮಾಜ ದ ಪ್ರಮುಖ ಬೇಡಿಕೆಯಾಗಿದೆ ಎಂದು ಶ್ರೀಸಂತೋಷ ಗುರೂಜಿ ಹೇಳಿದರು.
ನಮ್ಮನ್ನು 2ಎ ಗ್ರೂಫ್‌ಗೆ ಸೇರಿಸಿ ಮೀಸಲಾತಿ ನೀಡಬೇಕೆಂದು ನಾವೇನೂ ಹೋರಾಟ ಮಾಡುವುದಿಲ್ಲ. ಸರಕಾರದ ಮೇಲೆ ಒತ್ತಡ ತರುವುದಿಲ್ಲ. ಆದರೆ ಎಲ್ಲರನ್ನೂ 2ಎ ಒಂದೇ ಗುಂಪಿಗೆ ಸೇರಿಸಿ ಎಂದು ನಾವು ಒತ್ತಾಯಿಸುತ್ತೇವೆ ಎಂದರು.
ಪದಗ್ರಹಣ: ಇದೇ ವೇಳೆ ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕಗೊಂಡ ಮಹಾಸಂಸ್ಥಾನದ ವಿಶ್ವಸ್ಥ ಮಂಡಳಿಯ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭವೂ ಇದೇ ಸಂದರ್ಭದಲ್ಲಿ ನಡೆಯಿತು.
ಕೆ.ಎಂ.ಶೆಟ್ಟಿ ಅಧ್ಯಕ್ಷರಾಗಿ, ಬಿ.ಅಪ್ಪಣ್ಣ ಹೆಗ್ಡೆ ಉಪಾಧ್ಯಕ್ಷರಾಗಿ, ಡಾ.ಎಂ. ಮೋಹನ್ ಆಳ್ವ ಸಂಸ್ಥಾನದ ಕಾರ್ಯಕಲಾಪಗಳ ಚೇರ್‌ಮೆನ್, ಕಾರವಾರದ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ್ ಕಾರ್ಯದರ್ಶಿಯಾಗಿ, ಬೇಳೂರು ರಾಘವೇಂದ್ರ ಶೆಟ್ಟಿ ಜಂಟಿ ಕಾರ್ಯದರ್ಶಿ, ಉದ್ಯಮಿ ಮನೋಹರ ಶೆಟ್ಟಿ ಕೋಶಾಧಿಕಾರಿಯಾಗಿ, ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾಂಸ್ಕೃತಿಕ ರಾಯಭಾರಿ ಹಾಗೂ ಸಂತೋಷ ಶೆಟ್ಟಿ ಪೂನಾ ಇವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.
ಇವರಲ್ಲಿ ಡಾ.ಎಂ.ಮೋಹನ ಆಳ್ವ, ಸತೀಶ್ ಶೆಟ್ಟಿ ಪಟ್ಲ, ಮನೋಹರ ಶೆಟ್ಟಿ, ನಾಗರಾಜ ನಾಯಕ್, ರಾಘವೇಂದ್ರ ಶೆಟ್ಟಿ ಹಾಜರಿದ್ದು, ಶ್ರೀಸಂತೋಷ ಗುರೂಜಿ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮೇ ತಿಂಗಳಲ್ಲಿ ಆದಿ ದೈವಗಳಿಗೆ ನೇಮೋತ್ಸವ: ಸಂಸ್ಥಾನದಲ್ಲಿ ಇದೇ ಮೇ ತಿಂಗಳಲ್ಲಿ ಆದಿ ದೈವಗಳಿಗೆ ನೇಮೋತ್ಸವ ನೆರವೇರಿಸುವ ಬಗ್ಗೆ ನಿರ್ಧರಿಸಲಾಗಿದೆ. ಇದೇ ವೇಳೆ ಭೂತಾಳಪಾಂಡ್ಯ ಸಂಸ್ಥಾನದ ತುಳುನಾಡಿನ ಆದಿದೈವಗಳಿಗೆ ಭವ್ಯವಾದ ಛತ್ರ ಛಾವಣಿಗಳನ್ನು ನಿರ್ಮಿಸಿ ದೈವಗಳಿಗೆ ಅರ್ಪಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಡಾ.ಮೋಹನ ಆಳ್ವ ತಿಳಿಸಿದರು.
ಸಂಸ್ಥಾನದ ಕಲ್ಯಾಣ ಮಂಟಪದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಅಕ್ಟೋಬರ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಬಂಟರ ಪರಂಪರೆಯನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯ ಸಹ ನಿರ್ಮಾಣಗೊಳ್ಳು ತ್ತಿದೆ ಎಂದರು.
ನಾಡವ ಬಂಟರು, ನಾಡವರು, ನಾಡ ಒಕ್ಕಲಿಗರು, ಪರಿವಾರ ಬಂಟರು ಎಂದು ಗುರುತಿಸಿಕೊಳ್ಳುವ ಬಂಟರು ಯಾನೆ ನಾಡವರು ತಮ್ಮದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದ್ದಾರೆ. ಬಾರಕೂರು ಮಹಾಸಂಸ್ಥಾನ ೨೦೧೩ರಲ್ಲಿ ಶ್ರೀಸಂತೋಷ ಗುರೂಜಿ ಅವರ ಮೂಲಕ ಅಸ್ತಿತ್ವಕ್ಕೆ ಬಂದಿದ್ದು, ಇದೀಗ 10 ವರ್ಷಗಳನ್ನು ಪೂರೈಸಿದೆ ಎಂದು ಡಾ.ಆಳ್ವ ತಿಳಿಸಿದರು.

