ಕಾರ್ಕಳದಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ: ಬಿಜೆಪಿಗೆ ಡಾ.ಮಮತಾ ಹೆಗ್ಡೆ ಮನವಿ
"ಅವಕಾಶ ಸಿಗದಿದ್ದರೆ ಪಕ್ಷೇತರಳಾಗಿ ಸ್ಪರ್ಧೆ"

ಉಡುಪಿ, ಮಾ.16: ಈ ಬಾರಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಕಾರ್ಕಳದಿಂದ ಬಿಜೆಪಿ ಟಿಕೇಟ್‌ನಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಇದಕ್ಕಾಗಿ ಪಕ್ಷದ ನಾಯಕರನ್ನು ಸಹ ಭೇಟಿಯಾಗಿದ್ದೇನೆ. ಕಾರ್ಕಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುವ ದೃಢ ಸಂಕಲ್ಪ ಮಾಡಿರುವ ನಾನು ಬಿಜೆಪಿ ಟಿಕೇಟ್ ಸಿಗದಿದ್ದರೆ ಪಕ್ಷೇತರಳಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತೆಯೆಂದು ಹೇಳಿಕೊಂಡ ಡಾ.ಮಮತಾ ಹೆಗ್ಡೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಯಿಂದ ಸ್ಪರ್ಧಿಸುವ ಆಕಾಂಕ್ಷಿ ನಾನು. ಇದಕ್ಕಾಗಿ ಈಗಾಗಲೇ ತಯಾರಿಯನ್ನೂ ಮಾಡಿದ್ದೇನೆ. ಕ್ಷೇತ್ರದ ಈಗಿನ ಬಿಜೆಪಿ ಶಾಸಕ ಹಾಗೂ ಪ್ರಭಾವಿ ಸಚಿವರಾದ ಸುನಿಲ್ ಕುಮಾರ್ ಅಧಿಕಾರಾವಧಿಯಲ್ಲಿ ಕಾರ್ಕಳ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದೆ ಎಂದವರು ತಿಳಿಸಿದರು.
ಕಾರ್ಕಳದಲ್ಲಿ ಇದುವರೆಗೆ ಯಾವುದೇ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಗೊಂಡಿಲ್ಲ. ಹೀಗಾಗಿ ಯುವಕರಿಗೆ ಉದ್ಯೋಗಾವಕಾಶಗಳಿಲ್ಲ. ಕೃಷಿ, ಕೃಷಿ ಯಾಧಾರಿತ ಬೆಳೆಗಳ ಸಂಸ್ಕರಣೆ, ಮಾರುಕಟ್ಟೆಗೆ ಬೇಕಾದ ವ್ಯವಸ್ಥೆ ಇಲ್ಲ. ಕೃಷಿ ಕಾಲೇಜು ಸ್ಥಾಪನೆಗೂ ಯಾರೂ ಮುಂದಾಗಿಲ್ಲ. ಕಾರ್ಕಳಕ್ಕೆ ಕೊಂಕಣ ರೈಲ್ವೆಯನ್ನು ವಿಸ್ತರಿಸಿ ಧರ್ಮಸ್ಥಳಕ್ಕೆ ಜೋಡಿಸಲು ಯಾರೂ ಮನಸ್ಸು ಮಾಡಿಲ್ಲ ಎಂದರು.
ಕಾರ್ಕಳ ಕ್ಷೇತ್ರದಲ್ಲಿರುವುದು ಗೇರುಬೀಜ ಕಾರ್ಖಾನೆ ಹಾಗೂ ಅಕ್ಕಿ ಗಿರಣಿಗಳು. ಆದರೆ ಇದರಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ತನಗೆ ಸೀಟು ಸಿಕ್ಕಿ ಆಯ್ಕೆಯಾದರೆ ಈ ಎಲ್ಲಾ ಯೋಜನೆಗಳೊಂದಿಗೆ ಯುವಜನತೆಗೆ ಉದ್ಯೋಗಕ್ಕೆ ಆದ್ಯತೆ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಬಿಜೆಪಿ ಶಾಸಕರ ವಿರುದ್ಧ ಆರೋಪ ಮಾಡುವುದು, ಬಹಿರಂಗವಾಗಿ ಟಿಕೇಟ್‌ಗೆ ಆಗ್ರಹಿಸುವುದು ಪಕ್ಷದ ಶಿಸ್ತನ್ನು ಉಲ್ಲಂಘಿಸಿದಂತೆ ಅಲ್ಲವೇ, ನಿಮ್ಮ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಬಹುದಲ್ಲಾ ಎಂದರೆ, ನಾನು ಬಿಜೆಪಿ ಕಾರ್ಯಕರ್ತೆ ಮಾತ್ರ, ಇನ್ನೂ ಸದಸ್ಯತ್ವ ಪಡೆದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಶಾಲಾಕ್ಷಿ ಶೆಟ್ಟಿ, ವೇದಾವತಿ ಹೆಗ್ಡೆ, ಮಾಯಾ ಶೆಟ್ಟಿ, ವಿನೂತನ ಶೆಟ್ಟಿ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
