ಮಂಗಳೂರು : ಕೊಲೆಗೈದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಉಳ್ಳಾಲ: ಕೊಲೆಗೈದ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯ ಶೌಚಾಲಯದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
ಮೃತರನ್ನು ದೆಹಲಿ ಮೂಲದ ಸುಮಾರು 45 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಗಳ ಹಿಂದಷ್ಟೆ ಕೋಟೆಪುರಕ್ಕೆ ಹೊರ ರಾಜ್ಯದಿಂದ ಬಂದಿದ್ದ ಇವರು, ಸ್ಥಳೀಯ ಸೆಲೂನ್ ಮಾಲೀಕರ ಪರಿಚಯ ಮಾಡಿ ಅವರ ಮೂಲಕ ಕೋಟೆಪುರದ ಹಮೀದ್ ಎಂಬವರ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದರು. ಮನೆ ಮಾಲೀಕರಲ್ಲಿ ತಾವು ಬಟ್ಟೆ ವ್ಯಾಪಾರ ನಡೆಸುವವರು, ವ್ಯಾಪಾರ ನಡೆಸಲು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿದ್ದರು.
ಇಂದು ಸಂಜೆಯ ವೇಳೆ ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಗಮನಿಸಿ ಸ್ಥಳೀಯ ಯುವಕನೋರ್ವ ಮನೆಯನ್ನು ಗಮನಿಸಿದಾಗ ಶೌಚಾಲಯದೊಳಗೆ ಮಹಿಳೆಯ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಉಳ್ಳಾಲ ಪೊಲೀಸರು, ವಿಧಿ ವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.