ಟರ್ಕಿ ಭೂಕಂಪ ಪ್ರದೇಶದಲ್ಲಿ ಭೀಕರ ಪ್ರವಾಹ; 14 ಮಂದಿ ಮೃತ್ಯು

ಅಂಕಾರ, ಮಾ.16: ಟರ್ಕಿಯ ಭೂಕಂಪಪೀಡಿತ ವಲಯದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಕನಿಷ್ಟ 14 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ಮತ್ತು ಬುಧವಾರ ನಿರಂತರ ಸುರಿದ ಭಾರೀ ಮಳೆಯಿಂದಾಗಿ ಕಳೆದ ತಿಂಗಳು ಸಂಭವಿಸಿದ ಭೀಕರ ಭೂಕಂಪದಿಂದ ಸಂತ್ರಸ್ತರಾದವರು ನೆಲೆಸಿರುವ ಶಿಬಿರಗಳು ಹಾಗೂ ತಾತ್ಕಾಲಿಕ ಮನೆಗಳಿಗೆ ನೀರು ನುಗ್ಗಿದೆ. ಶರವೇಗದಿಂದ ಹರಿದುಬಂದ ಪ್ರವಾಹದಲ್ಲಿ ಹಲವಾರು ಮಂದಿ ಕೊಚ್ಚಿಹೋಗಿದ್ದು ಪ್ರಮುಖ ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಸಿರಿಯಾದ ಗಡಿಭಾಗದಲ್ಲಿರುವ ಸನ್ಲಿಯುರ್ಫಾ ನಗರದಲ್ಲಿ ನೆರೆಯಿಂದ 12 ಮಂದಿ ಮೃತಪಟ್ಟಿದ್ದರೆ, ಒಂದು ವರ್ಷದ ಮಗುವಿನ ಸಹಿತ ಇಬ್ಬರು ಅದಿಯಾಮನ್ ನಗರದಲ್ಲಿ ಮೃತರಾಗಿದ್ದಾರೆ. ಇಲ್ಲಿ ಆಸ್ಪತ್ರೆಯೊಂದರ ನೆಲಮಹಡಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ.
ನಗರದಲ್ಲಿ 5 ಮಂದಿ ನಾಪತ್ತೆಯಾಗಿದ್ದು, ರಸ್ತೆ ಪಕ್ಕ ಹಾಗೂ ಮನೆಯೆದುರು ನಿಲ್ಲಿಸಿರುವ ವಾಹನಗಳು ನೆರೆನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವವರನ್ನು ಹಗ್ಗ ಮತ್ತು ಮರದ ಕೊಂಬೆಗಳ ಮೂಲಕ ರಕ್ಷಿಸಲು ಸ್ಥಳೀಯರು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಫೆಬ್ರವರಿಯಲ್ಲಿ ಟರ್ಕಿಯನ್ನು ನಡುಗಿಸಿದ್ದ ಭೀಕರ ಭೂಕಂಪದಿಂದ ಚೇತರಿಸಿಕೊಳ್ಳುತ್ತಿರುವ ನಡುವೆಯೇ ಸಂಭವಿಸಿರುವ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ರಕ್ಷಣೆಗಾಗಿ 10 ತಂಡಗಳನ್ನು ರವಾನಿಸಲಾಗಿದೆ ಎಂದು ಸರಕಾರದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.