ರಮಝಾನ್ ನಲ್ಲಿ ರಾಜ್ಯದ ಉರ್ದು ಶಾಲೆಗಳ ವೇಳಾಪಟ್ಟಿ ಬದಲಾವಣೆ
ಬೆಂಗಳೂರು, ಮಾ.16: 2022-23ನೆ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಮಝಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಎ.10ರ ವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.
ಬೆಳಗ್ಗೆ 8 ಗಂಟೆಯಿಂದ 12.45ರ ವರೆಗೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ಈ ವ್ಯವಸ್ಥೆಯಿಂದ ಶಾಲೆಗಳ ಕೆಲಸದ ಅವಧಿಯಲ್ಲಿ ಕಡಿಮೆ ಆಗುವ ಅವಧಿಯನ್ನು ಇತರೆ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸರಿದೂಗಿಸಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಆಯುಕ್ತ ಡಾ.ವಿಶಾಲ್ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಮಝಾನ್ ತಿಂಗಳಲ್ಲಿ ಉಪವಾಸ ವ್ರತವನ್ನು ಕೈಗೊಳ್ಳುವುದರಿಂದ ಅವರಿಗೆ ಪ್ರತಿದಿನ ಸಂಜೆ ಅರ್ಧಗಂಟೆ ಮುಂಚಿತವಾಗಿ ತೆರಳಲು ಅನುಮತಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
2022-23ನೆ ಸಾಲಿಗೆ ನಿಗದಿಪಡಿಸಿರುವ ಎಸೆಸೆಲ್ಸಿ, 5ನೆ ಹಾಗೂ 8ನೆ ತರಗತಿ ಬೋರ್ಡ್ ಪರೀಕ್ಷಾ ವೇಳಾಪಟ್ಟಿಯಂತೆ ಕ್ರಮವಹಿಸಬೇಕು ಎಂದು ವಿಶಾಲ್ ತಿಳಿಸಿದ್ದಾರೆ.