ನ್ಯಾಯ ಪಡೆದೇ ತೀರ್ಥಹಳ್ಳಿಗೆ ಹೋಗುತ್ತೇನೆ: ಅಧಿಕಾರಿಗಳ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಕ್ರೋಶ
ಗ್ರಾಪಂ ಸದಸ್ಯರ ಮೇಲೆ ಹಲ್ಲೆ ಆರೋಪ

ಶಿವಮೊಗ್ಗ, ಮಾ.16: ತೀರ್ಥಹಳ್ಳಿಯಲ್ಲಿ ಹಲ್ಲೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವರೆಗೂ ನಾನು ಇಲ್ಲಿಯೇ ಪ್ರತಿಭಟನೆ ಮುಂದುವರೆಸುತ್ತೇನೆ. ನ್ಯಾಯ ಪಡೆದೇ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲಿನ ಕುರುವಳ್ಳಿಯ ಗ್ರಾಪಂ ನಲ್ಲಿ 15 ಜನ ಗ್ರಾಪಂ ಸದಸ್ಯರಿದ್ದಾರೆ. ಅದರಲ್ಲಿ 9 ಜನ ಗ್ರಾಪಂ ಸದಸ್ಯರು ಕಾಂಗ್ರೆಸ್‌ನವರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪಿಡಿಒರವರು ಹಲ್ಲೆ ಮಾಡಿದ್ದಾರೆ, ಆದರೆ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತೀರ್ಥಹಳ್ಳಿಯಲ್ಲಿ ವಿವಿಧ ಗ್ರಾ.ಪಂ. ಪಿಡಿಒಗಳು ಕಾಂಗ್ರೆಸ್ ಬೆಂಬಲಿತ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ಕೆಲವು ಹಲ್ಲೆ ಪ್ರಕರಣಗಳಿಗೆ ವಿಡಿಯೋ ಸಾಕ್ಷ್ಯಗಳಿವೆ. ಈ ಬಗ್ಗೆ ಸಿಇಒಗೆ ಎಂಟು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲ. ದೂರು ನೀಡಿದ್ದರೂ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆ ಅಧಿಕಾರಿಗಳು ಅಷ್ಟೊಂದು ಉತ್ತಮವಾಗಿ ಕೆಲಸ ಮಾಡುತ್ತಿದ್ದರೆ ಅವರನ್ನು ಆರಗ ಜ್ಞಾನೇಂದ್ರರವರು ತಮ್ಮ ಪಿಎ ಆಗಿ ನೇಮಿಸಿಕೊಳ್ಳಲಿ ಎಂದು ಆಕ್ರೋಶ ಹೊರಹಾಕಿದರು.
ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡುವುದಕ್ಕೂ ನಾನು ಸಿದ್ಧನಾಗಿದ್ದೇನೆ. ನ್ಯಾಯ ಪಡೆದುಕೊಂಡೇ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದರು.







