ಸಚಿವರ ನಿರ್ಧಾರಗಳನ್ನು ಸಿಎಂ ಬದಲಿಸುವಂತಿಲ್ಲ: ಶಿಂಧೆಗೆ ಮುಂಬೈ ಹೈಕೋರ್ಟ್ ತರಾಟೆ

ನಾಗ್ಪುರ: ಮಹಾರಾಷ್ಟ್ರದಲ್ಲಿ ಸಹಕಾರ ಸಚಿವ ಅತುಲ್ ಸಾವೆ ಅವರ ಕಾರ್ಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಸ್ತಕ್ಷೇಪ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಹೈಕೋರ್ಟ್, "ಸಂಬಂಧಪಟ್ಟ ಸಚಿವರು ಕೈಗೊಂಡ ನಿರ್ಧಾರವನ್ನು ಪರಾಮರ್ಶಿಸುವ ಅಥವಾ ಪರಿಷ್ಕರಿಸುವ ಮೇಲ್ವಿಚಾರಣಾ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ" ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರಾದ ಚಂದ್ರಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಸಿಡಿಸಿಸಿಬಿ) ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಿರುವ ಸಾವೆಯವರ ಆದೇಶಕ್ಕೆ ಮುಖ್ಯಮಂತ್ರಿ ಶಿಂಧೆ ಕಳೆದ ವರ್ಷದ ನವೆಂಬರ್ 29ರಂದು ನೀಡಿದ ತಡೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ನೇಮಕಾತಿ ಪ್ರಕ್ರಿಯೆ ಆರಂಭಿಸಲು ನೀಡಿರುವ ಆದೇಶ ಆಡಳಿತಾತ್ಮಕ ಸ್ವರೂಪದ್ದಾಗಿದ್ದು, ಇದನ್ನು ಆ ಖಾತೆಯ ಸಚಿವರು ಮಾತ್ರ ಪರಾಮರ್ಶಿಸುವ ಅಧಿಕಾರ ಇದೆ ಎಂದು ಹೈಕೋರ್ಟ್ ಹೇಳಿದೆ.
ಮಹಾರಾಷ್ಟ್ರ ಸರ್ಕಾರದ ನಿಯಮಾವಳಿಯ ಅಡಿಯಲ್ಲಿ ಸಚಿವರು ಕೈಗೊಂಡ ನಿರ್ಧಾರವನ್ನು ಪರಾಮರ್ಶಿಸುವ ಅಥವಾ ಪರಿಷ್ಕರಿಸುವ ಯಾವುದೇ ಸ್ವತಂತ್ರ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ. ಆದ್ದರಿಂದ ಅವರು ನೀಡಿರುವ ತಡೆಯಾಜ್ಞೆ ಊರ್ಜಿತವಲ್ಲ" ಎಂದು ಅಭಿಪ್ರಾಯಪಟ್ಟಿರುವ ವಿಭಾಗೀಯ ಪೀಠ, ಸಿಎಂ ಅವರ ಹಸ್ತಕ್ಷೇಪ ಅನುಪೇಕ್ಷಿತ ಹಾಗೂ ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಸಿಎಂ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಿಡಿಸಿಸಿಬಿ ಅರ್ಜಿ ಸಲ್ಲಿಸಿತ್ತು.







