ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಮಹಿಳೆಗೆ 12.47 ಲಕ್ಷ ರೂ. ವಂಚನೆ

ಮುಂಬೈ, ಮಾ. 17: ಮಹಾರಾಷ್ಟ್ರದ ಥಾಣೆ ನಗರದ 36 ವರ್ಷದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು 12 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ವಂಚಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸರು ಇಬ್ಬರು ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ವಂಚಕರ ಪೈಕಿ ಒಬ್ಬ 2022 ನವೆಂಬರ್ ನಲ್ಲಿ ಸಂತ್ರಸ್ತ ಮಹಿಳೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದನು. ತಾನು ಮಲೇಶ್ಯ ನಿವಾಸಿಯಾಗಿದ್ದು, ಬ್ರಿಟನ್ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆಗೆ ತನ್ನನ್ನು ಪರಿಚಯಿಸಿದನು.
ನಾನು ನಿಮಗೆ ಉಡುಗೊರೆಯೊಂದನ್ನು ಕಳುಹಿಸಿದ್ದೇನೆ ಎಂದು ಒಂದು ದಿನ ಆತ ಮಹಿಳೆಗೆ ತಿಳಿಸಿದನು. ಕೆಲವು ದಿನಗಳ ಬಳಿಕ, ಮಹಿಳೆಯೊಬ್ಬಳು ಸಂತ್ರಸ್ತ ಮಹಿಳೆಗೆ ಫೋನ್ ಮಾಡಿ, ತಾನು ದಿಲ್ಲಿಯ ಸುಂಕ ಕಚೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದಳು. ಸುಂಕ ಕಚೇರಿಯಿಂದ ನಿಮ್ಮ ಉಡುಗೊರೆ ಪೊಟ್ಟಣವನ್ನು ಬಿಡಿಸಲು ನೀವು ಸ್ವಲ್ಪ ಹಣ ಕೊಡಬೇಕಾಗುತ್ತದೆ ಹಾಗೂ ನಿಮ್ಮ ಸ್ನೇಹಿತ ನಿಮಗೆ ಸ್ವಲ್ಪ ವಿದೇಶಿ ಕರೆನ್ಸಿಯನ್ನೂ ಕಳುಹಿಸಿದ್ದಾರೆ ಎಂದು ಆಗಂತುಕ ಮಹಿಳೆ ಹೇಳಿದಳು.
ಉಡುಗೊರೆ ಪೊಟ್ಟಣವನ್ನು ಪಡೆಯುವುದಕ್ಕಾಗಿ ಸಂತ್ರಸ್ತ ಮಹಿಳೆಯು ಹಲವು ಕಂತುಗಳಲ್ಲಿ ಬ್ಯಾಂಕ್ ವ್ಯವಹಾರಗಳ ಮೂಲಕ ಒಟ್ಟು 12.47 ಲಕ್ಷ ರೂ. ಕಳುಹಿಸಿದರು. ಆದರೆ ಅವರಿಗೆ ಆ ಕನಸಿನ ಉಡುಗೊರೆ ಬರಲೇ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.







