ಕರಾವಳಿ ಜಿಲ್ಲೆಗಳಲ್ಲಿ ತಾಪಮಾನ ಏರಿಕೆ: ಮುಂಜಾಗ್ರತಾ ಕ್ರಮಕ್ಕೆ ಶಾಲೆಗಳಿಗೆ ಸೂಚನೆ

ಉಡುಪಿ, ಮಾ.17: ಹವಾಮಾನ ಇಲಾಖೆಯ ಮಾಹಿತಿಯಂತೆ, ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಕುರಿತಂತೆ ಹೆಚ್ಚಿನ ಗಮನ ಹರಿಸುವಂತೆ ಹಾಗೂ ಸುಡು ಬಿಸಿಲಿನಿಂದಾಗುವ ಗರಿಷ್ಠ ಉಷ್ಣಾಂಶದಿಂದ ರಕ್ಷಿಸಿಕೊಳ್ಳಲು ಶಾಲಾ ಅವಧಿಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ, ಶಿಕ್ಷಕರಿಗೆ ಸೂಚನೆಗಳನ್ನು ನೀಡಿದ್ದಾರೆ.
*ಬೆಳಗ್ಗೆ 11 ರಿಂದ ಅಪರಾಹ್ನ 3 ಗಂಟೆಯವರೆಗೆ ಮಕ್ಕಳು ಬಿಸಿಲಿನಲ್ಲಿ ಆಟವಾಡದಿರುವಂತೆ ನೋಡಿಕೊಳ್ಳಬೇಕು.
*ಮಕ್ಕಳು ನೇರ ಬಿಸಿಲಿನಿಂದ ತಪ್ಪಿಸಿಕೊಳ್ಳಬೇಕು. ಅಗತ್ಯ ಸಂದರ್ಭದಲ್ಲಿ ಹೊರಗೆ ಹೋಗಲೇಬೇಕಾದಾಗ ಪಾದರಕ್ಷೆ, ಕೊಡೆ, ಟೊಪ್ಪಿ ಬಳಸಬೇಕು.
*ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರನ್ನು ಆಗಾಗ ಕುಡಿಯಬೇಕು. ನಿಯಮಿತವಾಗಿ ಕೈ ತೊಳೆದು ಆಹಾರ ಸೇವಿಸಬೇಕು.
*ಅಡುಗೆ ತಯಾರಿ ಸಂದರ್ಭದಲ್ಲಿ ಕೋಣೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಬೇಕು. ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚು ಬಳಕೆ ಮಾಡಬೇಕು.
ಈ ಎಲ್ಲಾ ಅಂಶಗಳ ಬಗ್ಗೆ ಮುಖ್ಯಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ಪೋಷಕರು ಕ್ರಮವಹಿಸುವಂತೆ ಮಾಹಿತಿ ನೀಡಲು ಹಾಗೂ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಶಾಲೆಗಳಿಗೆ ಸೂಚನೆ ನೀಡುವಂತೆ ಡಿಡಿಪಿಐ ಅವರು ತಿಳಿಸಿದ್ದಾರೆ.







