ಮಾ.18-19: ಉತ್ತರ ಕನ್ನಡ, ಉಡುಪಿ, ದ.ಕ.ಜಿಲ್ಲೆಗಳಿಗೆ ಕೇಂದ್ರ ಮೀನುಗಾರಿಕಾ ಸಚಿವ ಪಿ.ರೂಪಾಲ ಭೇಟಿ

ಉಡುಪಿ, ಮಾ.17: ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವ ಪುರುಷೋತ್ತಮ್ ರೂಪಾಲ ಅವರು ಮಾ.18 ಮತ್ತು 19ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಮಜ್ಲಿ, ಬೇಲಂಬಾರ, ಮಂಕಿ, ಮುರ್ಡೇಶ್ವರ, ಅಳಿವೆ ಕೋಡಿ ಉಡುಪಿ ಜಿಲ್ಲೆಯ ಮಲ್ಪೆ, ಉಡುಪಿ, ಉಚ್ಚಿಲ ಹಾಗೂ ಮಂಗಳೂರಿನಲ್ಲಿ ಮೀನುಗಾರರೊಂದಿಗೆ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾ.18ರಂದು ಶನಿವಾರ ಬೆಳಗ್ಗೆ ಗೋವಾದಿಂದ ಕಾರವಾರ ಬಂದರಿಗೆ ಆಗಮಿಸುವ ಸಚಿವರು, ಅಪರಾಹ್ನ 1:00ಗಂಟೆಯವರೆಗೆ ಮಜ್ಲಿ ಹಾಗೂ ಕಾರವಾರಗಳಲ್ಲಿ ಮೀನುಗಾರರೊಂದಿಗೆ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಕಾರವಾರದಿಂದ 2:15ಕ್ಕೆ ಬೇಲಂಬಾರ ಆಗಮಿಸುವ ಸಚಿವರು ಮೀನುಗಾರರೊಂದಿಗೆ ಸಂವಾದ ನಡೆಸಿಸಂಜೆ 4ಕ್ಕೆ ಮಂಕಿಗೆ ಆಗಮಿಸುವರು. ಅಲ್ಲಿಯೂ ಮೀನುಗಾರರೊಂದಿಗೆ ಸಂವಾದ ನಡೆಸಿ 5:20ಕ್ಕೆ ಮುರ್ಡೇಶ್ವರದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ 6:15ಕ್ಕೆ ಅಳಿವೆಕೋಡಿಯಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸುವರು.
ರಾತ್ರಿ 8:00ಕ್ಕೆ ಐಸಿಜಿ ಹಡಗು ವಿಕ್ರಮ್‌ನಲ್ಲಿ ಮಲ್ಪೆಗೆ ಪ್ರಯಾಣ ಬೆಳೆಸುವರು. ಮಲ್ಪೆಗೆ ಆಗಮಿಸಿದ ಬಳಿಕ ವಿಕ್ರಮ್ ಹಡಗಿನಲ್ಲಿ ರಾತ್ರಿ ವಾಸ್ತವ್ಯ ಮಾಡುವ ಸಚಿವರು ಮಾ.19ರ ರವಿವಾರ ಬೆಳಗ್ಗೆ 8:00ಕ್ಕೆ ಮಲ್ಪೆ ಮೀನುಗಾರಿಕಾ ಬಂದರಿಗೆ ಆಗಮಿಸುವರು.
ಬೆಳಗ್ಗೆ 8:15ರಿಂದ 10:00ರವರೆಗೆ ಮಲ್ಪೆಯಲ್ಲಿ ಮೀನುಗಾರರೊಂದಿಗೆ ಸಂವಾದ, ಬಳಿಕ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಅಪರಾಹ್ನ 2:20ಕ್ಕೆ ಉಚ್ಚಿಲ ಗ್ರಾಮಕ್ಕೆ ಆಗಮಿಸುವರು. ಅಲ್ಲಿ ಮೀನುಗಾರರೊಂದಿಗೆ ಸಂವಾದದ ಬಳಿಕ ಮಂಗಳೂರಿಗೆ ತೆರಳುವರು. ಪುರಭವನದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಂಜೆ 6:30ಕ್ಕೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹೊಸದಿಲ್ಲಿಗೆ ಪ್ರಯಾಣಿಸುವರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







