ಕಾಂಗ್ರೆಸ್-ಎಸ್‍ಡಿಪಿಐ ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು: ಶೋಭಾ ಕರಂದ್ಲಾಜೆ
ಬೆಂಗಳೂರು: ಕಾಂಗ್ರೆಸ್ (Congress) ಮತ್ತು ಎಸ್‍ಡಿಪಿಐ (SDPI) ನಡುವಿನ ಸಂಬಂಧದ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕೆಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಗೆ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಈ ಹಿಂದೆ ಹೊಂದಾಣಿಕೆಯನ್ನು ಮಾಡಿಕೊಂಡಿದ್ದರು. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಚುನಾವಣಾ ಹೊಂದಾಣಿಕೆ ಏನಿತ್ತು ಎಂಬುದು ಜನರಿಗೆ ತಿಳಿದಿದೆ ಎಂದರು.
ಕೇಂದ್ರ ಸರಕಾರ ಪಿಎಫ್‍ಐ ನಿಷೇಧದ ಕುರಿತಂತೆ ದಿಟ್ಟವಾದ ನಿರ್ಣಯ ತೆಗೆದುಕೊಂಡಿದೆ. ಪಿಎಫ್‍ಐ ಕಾರ್ಯಕರ್ತರು ಎಸ್‍ಡಿಪಿಐ ಸೇರಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಪಿಎಫ್‍ಐ ಮೇಲಿದ್ದ ಪ್ರಕರಣಗಳನ್ನು ಹಿಂಪಡೆದರು. ಇವತ್ತು ಅವರು ಸಮಾಜದಲ್ಲಿ ಗೊಂದಲ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.
ಕಳೆದ ಬಾರಿ 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಸ್‍ಡಿಪಿಐ ಯೋಜಿಸಿತ್ತು. ಆದರೆ, ಕಾಂಗ್ರೆಸ್ ನಾಯಕರ ಕೋರಿಕೆ ಮೇರೆಗೆ ಕೇವಲ ಮೂರು ಜನರನ್ನು ಮಾತ್ರ ಕಣಕ್ಕಿಳಿಸಿತ್ತು. ಸಿದ್ದರಾಮಯ್ಯ ಪಿಎಫ್‍ಐ-ಎಸ್‍ಡಿಪಿಐಗೆ ಸಹಾಯ ಮಾಡಿದ್ದು ಸ್ಪಷ್ಟವಾಗಿದೆ. ಎಸ್‍ಡಿಪಿಐ ಜೊತೆ ಹೊಂದಾಣಿಕೆ ರಾಜಕೀಯವನ್ನು ಮಾಡಿಕೊಂಡಿರುವುದು ದೃಢಪಟ್ಟಿದೆ ಎಂದು ಅವರು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನೆಮಾ ಶೀರ್ಷಿಕೆ ನೋಂದಣಿ ಮಾಡಿದ ಮುನಿರತ್ನ: ಒಕ್ಕಲಿಗರಿಗೆ ಟಿಪ್ಪು ಕೊಲೆಯ ಕಳಂಕ ಎಂದ ಕುಮಾರಸ್ವಾಮಿ