ಚುನಾವಣಾ ಅಕ್ರಮಗಳನ್ನು ತಡೆಯಲು ಸಮಾನ ಮನಸ್ಕರ ಒಕ್ಕೂಟ ಒತ್ತಾಯ
ಬೆಂಗಳೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸಮಾನ ಮನಸ್ಕರ ಒಕ್ಕೂಟ-ಕರ್ನಾಟಕವು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದೆ.
ಶುಕ್ರವಾರ ಒಕ್ಕಟದ ಸದಸ್ಯರೂ ಆಗಿರುವ ಹಿರಿಯ ಲೇಖಕರಾದ ಡಾ.ಕೆ.ಮರಳಸಿದ್ಧಪ್ಪ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ವಸುಂಧರ ಭೂಪತಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ರುದ್ರಪ್ಪ ಹನಗವಾಡಿ ಸೇರಿದಂತೆ ಮತ್ತಿತರರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ‘ಮತದಾರರನ್ನು ಓಲೈಕೆ ಮಾಡಲು ಹಣ ಹಂಚುವುದು, ವಸ್ತುಗಳನ್ನು ಉಡುಗೊರೆಯಾಗಿ ಕೊಡುವುದು, ದೇವರು ಮತ್ತು ಧರ್ಮಗಳ ಮೇಲೆ ಆಣೆ-ಪ್ರಮಾಣಗಳನ್ನು ಮಾಡಿಸಲಾಗುತ್ತಿದೆ. ಇದರಿಂದ ಸಂವಿಧಾನಕ್ಕೆ ಚ್ಯುತಿಯಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಪ್ರಜಾಪ್ರಭುತ್ವ ಇಂದು ಆತಂಕದಲ್ಲಿದೆ. ದೇಶದಲ್ಲಿ ಸಾಮರಸ್ಯ ಹಾಗೂ ಸೌಹಾರ್ದತೆಯು ನಶಿಸಿ ಹೋಗುತ್ತಿದೆ. ವಿಶ್ವಮಟ್ಟದಲ್ಲಿ ನಮ್ಮ ದೇಶದ ಬಗ್ಗೆ ಇಂತಹ ಮಾತುಗಳೇ ಕೇಳಿ ಬರುತ್ತಿವೆ. ಹಾಗಾಗಿ ಸಂಘಟನಾತ್ಮ ಹೋರಾಟಕ್ಕೆ ನಾವೆಲ್ಲಾ ಸಿದ್ಧರಾಗಿ ‘ಸಮಾನ ಮನಸ್ಕರ ಒಕ್ಕೂಟ-ಕರ್ನಾಟಕ’ವನ್ನು ಸ್ಥಾಪಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
‘ರಾಜ್ಯದಲ್ಲಿ 47 ಮಂದಿ ಶಾಸಕರು ಕ್ರಿಮಿನಲ್ ಹಿನ್ನೆಲೆಯಿಂದ ಬಂದಿದ್ದಾರೆ ಎಂದು ನಿವೃತ್ತ ನ್ಯಾಯಾಧೀಶರೊಬ್ಬರು ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ಈ ಕ್ರಿಮಿನಲ್ ಹಿನ್ನೆಯವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಈಗ ಸ್ಥಾಪನೆಯಾದ ಒಕ್ಕೂಟವನ್ನು ಜಿಲ್ಲಾ, ತಾಲೂಕು ಕೇಂದ್ರಗಳಿಗೆ ವಿಕೇಂದ್ರಿಕರಣಗೊಳಿಸಲಾಗುತ್ತದೆ. ನಂತರ ಸಮಾವೇಶಗಳನ್ನು ಆಯೋಜನೆ ಮಾಡುವ ಮೂಲಕ ಮುಂಬರಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜನಜಾಗೃತಿಯನ್ನು ಉಂಟು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಲೀಲಾ ಸಂಪಿಗೆ, ಎ.ಕೆ. ಕರುಣಾಕರ, ಕೆ.ಎಸ್.ವಿಮಲಾ, ಜಾಣಗೆರೆ ವೆಂಕಟರಾಮಯ್ಯ, ವಿಜಯಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
‘ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ, ದ್ವೇಷ ಭಾಷಣ ಮಾತುಗಳು, ಜನರ ಮಧ್ಯೆ ಇರುವ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ. ಆದುದರಿಂದ ತಮ್ಮ ಅಭ್ಯರ್ಥಿಗಳಿಗೆ ಈ ವಿಚಾರಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಮ್ಮ ಪಕ್ಷ ಇಂತಹ ಯಾವುದೇ ಅಹಿತಕರ ಸನ್ನಿವೇಶಗಳು, ಮಾತುಗಳು ಬಾರದಂತೆ ಕಡ್ಡಾಯವಾಗಿ ಗಮನಿಸಬೇಕು. ಪಕ್ಷಗಳು ಪ್ರಣಾಳಿಕೆ, ಆಶ್ವಾಸನೆಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಸುಳ್ಳು ಮತ್ತು ಭ್ರಮಾತ್ಮಕ ಆಶ್ವಾಸನೆಗಳನ್ನು ಪ್ರಣಾಳಿಕೆಯಲ್ಲಿ ನೀಡಬಾರದು. ಗೂಂಡಾ ಪ್ರವೃತ್ತಿಯವರನ್ನು ದೂರವಿಟ್ಟು ಸೇವಾ ಬದ್ಧತೆಯ, ಸರಳ ಸಜ್ಜನ ವ್ಯಕ್ತಿಗಳನ್ನು ಪಕ್ಷದ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಬೇಕು’ ಎಂದು ಸಮಾನ ಮನಸ್ಕರ ಒಕ್ಕೂಟ ಮನವಿ ಮಾಡಿದೆ.