ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗಳನ್ನು ಬಂಧಿಸಲು ಒತ್ತಾಯ
ಮಂಗಳೂರು: ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತ್ಯದ ಮಂಗಳೂರು ಕಚೇರಿಯಲ್ಲಿ ಬಿಷಪ್ ಅವರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಆರು ಮಂದಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಎಸ್‌ಐಟಿಎ ಬೆನಿಫಿಷಿಯರೀಸ್ ಅಸೋಸಿಯೇಷನ್ ಆರೋಪಿಸಿದೆ.
ಅಸೋಸಿಯೇಷನ್ ಕಾರ್ಯದರ್ಶಿ ಎಸ್. ಪ್ರೇಮಕುಮಾರ್ ಅವರು, ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಹಿಂದಿನ ಬಿಷಪ್ 2021 ನವೆಂಬರ್‌ನಲ್ಲಿ ನಿವೃತ್ತರಾಗಿದ್ದಾರೆ. ಆ ನಂತರ ಅಧಿಕಾರ ನಿರ್ವಹಿಸಿದ ಪದಾಧಿಕಾರಿಗಳಲ್ಲಿ ಕೆಲವರು ಈ ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂದರು.
ಸಂಸ್ಥೆಯ ಖಜಾಂಚಿ ಹಾಗೂ ಕಾನೂನು ಸಲಹೆಗಾರರು ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ಸಹಕಾರದಲ್ಲಿ ಮಹಿಳಾ ಪೊಲೀಸ್ ಠಾಣೆಗೆ ಮಾ.7ರಂದು ದೂರು ನೀಡಲಾಗಿದೆ. ಆದರೆ ಇಲ್ಲಿವರೆಗೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ವಾಗಿಲ್ಲ. ಮುಂದೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
ಅಸೋಸಿಯೇಶನ್ ಪದಾಧಿಕಾರಿಗಳಾದ ಸಾಮ್ಯುವೆಲ್ ಸದಾನಂದ, ಜತೆ ಕಾರ್ಯದರ್ಶಿ ಸುದರ್ಶನ್ ಕುಮಾರ್, ಸತ್ಯಕುಮಾರ್, ಡಾ.ಬ್ರೇನ್ ಸೋನ್ಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.