ಸುರತ್ಕಲ್: ಆಟೊ ರಿಕ್ಷಾ ಚಾಲಕರ-ಮಾಲಕರ ಸಂಘದಿಂದ ರಸ್ತೆ ತಡೆದು ಪ್ರತಿಭಟನೆ

ಸುರತ್ಕಲ್, ಮಾ. 17: ಕಾನ ಬಾಳ ಎಂಆರ್‌ಪಿಎಲ್ ಮುಖ್ಯ ರಸ್ತೆ ಕಾಮಗಾರಿ ಪೂರ್ಭಗೊಳಿಸದೇ ವಿಳಂಭ ಧೋರಣೆ ಅನುಸರಿಸುತ್ತಿರುವ ಗುತ್ತಿಗೆದಾರನ ಕ್ರಮ ವಹಿಸಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಸುರತ್ಕಲ್ ಘಟಕ ಮತ್ತು ಕಾನ ತೋಕೂರು ಆಟೊ ರಿಕ್ಷಾ ಚಾಲಕರ ಮಾಲಕರ ಸಂಘದ ವತಿಯಿಂದ ಕಾನ ಜಂಕ್ಷನ್‌ನಲ್ಲಿ ಶುಕ್ರವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸಿದ್ದರಾಮಯ್ಯ ಸರಕಾರ 58 ಕೋಟಿ ರೂ. ಮಂಜೂರು ಮಾಡಿತ್ತು. ಬಳಿಕ ಕುಮಾರಸ್ವಾಮಿಯವರ ಸರಕಾರದ ಸಮಯದಲ್ಲಿ ಅನುದಾನ ಇದ್ದರೂ ಇಲ್ಲಿನ ಶಾಸಕ ಆಕ್ಷೇಪಣೆಯಿಂದ ರಸ್ತೆ ಅಭಿವೃದ್ಧಿ ನಡೆದಿರಲಿಲ್ಲ. ಬಳಿಕ ರಸ್ತೆ ಅಭಿವೃದ್ಧಿಗೆ ಬಂದಿದ್ದ ಅನುದಾನ ಕ್ಷೇತ್ರದ ಬೇರೆ ಬೇರೆ ಕಾರ್ಯಗಳಿಗೆ ಅದನ್ನು ವಿನಿಯೋಗಿಸಲಾಗಿತ್ತು.
ಈ ರಸ್ತೆಯನ್ನು ಷಟ್ಪಥವಾಗಿ ನಿರ್ಮಾಣ ಮಾಡಿ ಅದರ ಮಧ್ಯದಲ್ಲಿ ಸುಂದರ ಹೂವಿನ ತೋಟ, ರಸ್ತೆಯ ಮಧ್ಯದಲ್ಲಿ ದಾರಿದೀಪಗಳು, ಸೈಕಲ್ ಪಾತ್, ಪಾದಚಾರಿಗಳಿಗೆ ಅನುಕೂಲವಗುವ ಸ್ಮಾರ್ಟ್ ರಸ್ತೆಮಾಡಬೇಕಿತ್ತು. ಆದರೆ, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಕ್ರಿಟ್‌ನ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಚೊಕ್ಕಬೆಟ್ಟು ಕ್ರಾಸ್‌ನಿಂದ ಕಾನವರೆಗೆ ಓರ್ವ ಗುತ್ತಿಗೆದಾರನಿಗೆ ನೀಡಲಾಗಿದ್ದು, ಕಾಮಗಾರಿ ನಡೆಯುತ್ತಿದೆ. ಕಾನದಿಂದ ಕಾರ್ಗೋಗೇಟ್ ವರೆಗಿನ ಮತ್ತೋರ್ವ ಗುತ್ತಿಗೆದಾರನಿಗೆ ನೀಡಿದ್ದು, ಕಾಮಗಾರಿಯನ್ನು ಮಾಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗಿದೆ. ಇದರಿಂದ ಧೂಳಿನಿಂದ ಕೂಡಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ದ್ವಿಚಕ್ರ ಸವಾರರು ಹೊಂಡಗುಂಡಿಗಳು ಮತ್ತು ಧೂನಳಿನಿಂದಾಗಿ ಬಿದ್ದು, ಅಪಘಾತಕ್ಕೀಡಾಗುತ್ತಿ ದ್ದಾರೆ ಎಂದು ಇಮ್ತಿಯಾಝ್ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಶಾಸಕರು ಮತ್ತು ಗುತ್ತಿಗೆ ದಾರರಿಗೆ ಒಂದು ತಿಂಗಳಿನ ಗಡುವು ನೀಡಲಾಗುತ್ತಿದೆ. ಅದಾಗಿಯೂ ಶಾಸಕರು ಮತ್ತು ಗುತ್ತಿಗೆದಾರ ಎಚ್ಚೆತ್ತುಕೊಂಡು ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಮಾಡದೇ ನಿರ್ಲಕ್ಷ್ಯವನ್ನು ಮುಂದುವರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಡಿವೈಎಫ್‌ಐ ಎಲ್ಲಾ ಸ್ತರದ ಜನಸಾಮಾನ್ಯರನ್ನು ಸೇರಿಸಿಕೊಂಡು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭ ಪ್ರತಿಭಟನಾಕಾರರು ಸಾಂಕೇತಿಕವಾಗಿ ಸುರತ್ಕಲ್ ಕಾನ ಎಂಆರೆಪಿಎಲ್ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿ ಶಾಸಕರು, ಗುತ್ತಿಗೆದಾರರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ನಗರ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡ ಗಣೇಶ್ ಪ್ರೇಮ್ ನಗರ ಪ್ರತಿಭಟನೆಯಲ್ಲಿ ಮಾತನಾಡಿದರು.
ಡಿವೈಎಫ್ಐ ಮುಖಂಡರಾದ ಸಾದಿಕ್ ಕಿಲ್ಪಾಡಿ, ಮುಸ್ತಫಾ ಅಂಗರಗುಂಡಿ, ನವಾಝ್ ಕುಳಾಯಿ, ಮಕ್ಸೂದ್ ಬಿ.ಕೆ., ಐ ಮುಹಮ್ಮದ್, ರಫೀಕ್ ಸ್ಟಾರ್, ಹುಸೈನ್ ಬಾಳ, ಸೈಫರ್ ಆಲಿ ಚೊಕ್ಕಬೆಟ್ಟು, ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಮುಹಮ್ಮದ್ ಶರೀಫ್ ಕಾನ, ಸಾಮಾಜಿಕ ಮುಂದಾಳುಗಳಾದ ಜಗದೀಶ್ ಕಾನ, ಫ್ರಾನ್ಸಿಸ್, ಮೆಹಬೂಬ್ ಖಾನ್, ಆಟೋ ರಿಕ್ಷಾ ಚಾಲಕರ ಸಂಘದ ಹಂಝ ಮೈಂದಗುರಿ ಮುಂತಾದವರು ಉಪಸ್ಥಿತರಿದ್ದರು.
ಮುಚ್ಚುವ ಸ್ಥಿತಿಗೆ ತಲುಪಿದ ಅಂಗನವಾಡಿ ಕೇಂದ್ರ
ರಸ್ತೆಯ ಅಪೂರ್ಣ ಕಾಮಗಾರಿಯಿಂದ ಪರಿಸರದಲ್ಲಿ ಧೂಳು ಹರಡಿ ಜನರ ಆರೋಗ್ಯಕ್ಕೆ ತೊಂದರೆ ಆಗುತ್ತಿದೆ. ಅಂಗನವಾಡಿಯ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿ ಅಂಗನವಾಡಿ ಕೇಂದ್ರ ಮುಚ್ಚುವ ಸ್ಥಿತಿಗೆ ತಲುಪಿದೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.