ಅದಾನಿ ಗ್ರೂಪ್ ವಿರುದ್ಧ ತನಿಖೆ ಕುರಿತು ಅಮಿತ್ ಶಾ ಪ್ರತಿಕ್ರಿಯಿಸಿದ್ದು ಹೀಗೆ…
2 ಪ್ರಕರಣ ಹೊರತುಪಡಿಸಿ ಉಳಿದೆಲ್ಲವೂ ಯುಪಿಎ ಸರಕಾರದ ಅವಧಿಯಲ್ಲಿ ದಾಖಲಾಗಿವೆ

ಹೊಸದಿಲ್ಲಿ: ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದು ತನಿಖೆ ನಡೆಸುತ್ತಿರುವ ಎರಡು ಪ್ರಕರಣ ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳು ಯುಪಿಎ ಸರಕಾರದ ಅವಧಿಯಲ್ಲಿ ದಾಖಲಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ಶುಕ್ರವಾರ ದಿಲ್ಲಿಯಲ್ಲಿ ನಡೆದ India Today Conclave ನಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ತನಿಖಾ ಸಂಸ್ಥೆಗಳು ಏನೇ ಮಾಡಿದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು.
ಅದಾನಿ ಗ್ರೂಪ್ ವಿರುದ್ಧದ ತನಿಖೆಯ ಕುರಿತು ಕೇಳಲಾದ ಪ್ರಶ್ನೆಗೆ, ಉತ್ತರಿಸಿದ ಶಾ, “ನಿವೃತ್ತ ನ್ಯಾಯಮೂರ್ತಿಗಳಿರುವ ಇಬ್ಬರು ಸದಸ್ಯರ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ ಹಾಗೂ ಪ್ರತಿಯೊಬ್ಬರೂ ಹೋಗಿ ತಮ್ಮ ಬಳಿ ಇರುವ ಪುರಾವೆಗಳನ್ನು ಸಲ್ಲಿಸಬೇಕು. ತಪ್ಪು ಮಾಡಿದ್ದರೆ ಯಾರನ್ನೂ ಬಿಡಬಾರದು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ನಂಬಿಕೆ ಇಡಬೇಕು. ಯಾರೂ ಕೂಡ ಆಧಾರ ರಹಿತ ಆರೋಪಗಳನ್ನು ಮಾಡಬಾರದು, ಅವು ಹೆಚ್ಚು ಕಾಲ ಉಳಿಯುವುದಿಲ್ಲ’’ ಎಂದರು.
ಈ ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕಿಂತ ಮೇಲಲ್ಲ ಹಾಗೂ ಯಾವುದೇ ನೋಟಿಸ್, ಎಫ್‌ಐಆರ್ ಮತ್ತು ಚಾರ್ಜ್ ಶೀಟ್ ಅನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು ಎಂದು ಗೃಹ ಸಚಿವರು ಹೇಳಿದರು.
''ನ್ಯಾಯಾಲಯಕ್ಕೆ ಹೋಗುವ ಬದಲು ಅವರು ಹೊರಗೆ ಯಾಕೆ ಕೂಗಾಡುತ್ತಿದ್ದಾರೆ?ಯಾರ ಮೇಲಾದರೂ ಭ್ರಷ್ಟಾಚಾರದ ಆರೋಪವಿದ್ದರೆ ತನಿಖೆಯಾಗಬೇಕಲ್ಲವೇ ಎಂದು ಜನತೆಯನ್ನು ಕೇಳಬೇಕೆಂದಿದ್ದೇನೆ.ಎರಡನ್ನು ಹೊರತುಪಡಿಸಿ ಈ ಎಲ್ಲಾ ಪ್ರಕರಣಗಳು ಯುಪಿಎ ಆಡಳಿತಾವಧಿಯಲ್ಲಿ ದಾಖಲಾಗಿವೆ. ನಮ್ಮ ಸರಕಾರದ ಅವಧಿಯಲ್ಲಿ ಅಲ್ಲ’’ ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ರೂ. ಮೊತ್ತದ ಹಗರಣಗಳ ಬಗ್ಗೆ ಆರೋಪಗಳು ಕೇಳಿ ಬಂದಾಗ, ಪರಿಸ್ಥಿತಿಯನ್ನು ಶಾಂತಗೊಳಿಸಲು ಸರಕಾರ ಸಿಬಿಐ ಮೂಲಕ ಪ್ರಕರಣವನ್ನು ದಾಖಲಿಸಿತು ಎಂದು ಶಾ ಹೇಳಿದರು.
ತನಿಖಾ ಸಂಸ್ಥೆಗಳು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಿವೆ ಎಂಬ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, "ಅವರನ್ನು ನ್ಯಾಯಾಲಯಕ್ಕೆ ಹೋಗದಂತೆ ತಡೆಯುವವರು ಯಾರು? ಅವರ ಪಕ್ಷದಲ್ಲಿ ನಮಗಿಂತ ಉತ್ತಮ ವಕೀಲರಿದ್ದಾರೆ. ಏಜೆನ್ಸಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿವೆ, ನೀವು ಕಾನೂನನ್ನು ಅನುಸರಿಸಿ ಎಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ಅದೊಂದೇ ದಾರಿಯಾಗಿದೆ'' ಎಂದರು.







