ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ಕುರಿತ ನಕಲಿ ವೀಡಿಯೊ: ಬಿಹಾರದ ಯೂಟ್ಯೂಬರ್ ಬಂಧನ

ಪಾಟ್ನಾ: ತಮಿಳುನಾಡಿನಲ್ಲಿ ಬಿಹಾರಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆದಿದೆ ಎಂಬ ಕುರಿತಾಗಿ ನಕಲಿ ವೀಡಿಯೊ ಸೃಷ್ಟಿಸಿದ ಆರೋಪದ ಮೇಲೆ ಬಿಹಾರ ಹಾಗೂ ತಮಿಳುನಾಡು ಪೊಲೀಸರಿಂದ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಬಿಹಾರದ ಜನಪ್ರಿಯ ಯೂಟ್ಯೂಬರ್ ಮನೀಶ್ ಕಶ್ಯಪ್ ನನ್ನು ಶನಿವಾರ ಬೆಳಿಗ್ಗೆ ಬಂಧಿಸಲಾಗಿದೆ. ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ.
ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯ ಜಗದೀಶ್‌ಪುರ ಪೊಲೀಸ್ ಠಾಣೆಯಲ್ಲಿ ಕಶ್ಯಪ್ ನನ್ನು ಬಂಧಿಸಲಾಯಿತು, ಬಿಹಾರ ಪೊಲೀಸರು ಹಾಗೂ ಅದರ ಆರ್ಥಿಕ ಅಪರಾಧಗಳ ಘಟಕವು ಕಶ್ಯಪ್ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆತನ ಮನೆಗೆ ತಲುಪಿದ ತಕ್ಷಣ ಕಶ್ಯಪ್ ಶರಣಾಗತನಾಗಿದ್ದಾನೆ. ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಬಿಹಾರದ ನಿವಾಸಿಗಳ ಬಗ್ಗೆ ಸುಳ್ಳು ಹಾಗೂ ತಪ್ಪುದಾರಿಗೆಳೆಯುವ ವೀಡಿಯೊಗಳನ್ನು ಪ್ರಸಾರ ಮಾಡಿದ ಆರೋಪ ಕಶ್ಯಪ್ ಮೇಲಿದೆ.
ಬಿಹಾರದ ಆರ್ಥಿಕ ಅಪರಾಧಗಳ ಘಟಕ (ಇಒಯು) ಕಶ್ಯಪ್ ಹಾಗೂ ಇತರರ ವಿರುದ್ಧ "ತಮಿಳುನಾಡಿನಲ್ಲಿ ವಲಸಿಗರನ್ನು ಕೊಲ್ಲುವ ಮತ್ತು ಥಳಿಸುವ ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡುವಲ್ಲಿ ತೊಡಗಿಸಿಕೊಂಡಿದೆ" ಎಂಬ ಆರೋಪದ ಮೇಲೆ ಮೂರು ಪ್ರಕರಣಗಳನ್ನು ದಾಖಲಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಹಾರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕವು, “ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ ಬಿಹಾರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ನಕಲಿ ವಿಡಿಯೊ ಹಂಚಿದ್ದ ಆರೋಪದಲ್ಲಿ ಕಶ್ಯಪ್ ಬಿಹಾರ ಮತ್ತು ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದರು. ಬಂಧನ ಹಾಗೂ ಆಸ್ತಿಗಳ ಮುಟ್ಟುಗೋಲು ಭೀತಿಯಿಂದ ಅವರು ಶನಿವಾರ ಪೊಲೀಸರೆದುರು ಶರಣಾಗಿದ್ದಾರೆ” ಎಂದು ತಿಳಿಸಿದೆ.
ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಬಿಹಾರ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ನಕಲಿ ವಿಡಿಯೊ ಪ್ರಸರಣವಾದ ನಂತರ ಬಿಹಾರ ಸರ್ಕಾರವು ಉನ್ನತ ಅಧಿಕಾರಗಳನ್ನೊಳಗೊಂಡ ನಾಲ್ಕು ಸದಸ್ಯರ ತಂಡವನ್ನು ಪ್ರಕರಣದ ಕುರಿತು ತನಿಖೆ ನಡೆಸಲು ತಮಿಳುನಾಡು ಅಧಿಕಾರಿಗಳೊಂದಿಗೆ ಸಹಕರಿಸಲು ತಮಿಳುನಾಡಿಗೆ ಕಳುಹಿಸಿಕೊಟ್ಟಿತ್ತು.







