ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯಿಂದ ಸಲ್ಮಾನ್ ಖಾನ್‌ಗೆ ಮತ್ತೆ ಜೀವಬೆದರಿಕೆ

ಹೊಸದಿಲ್ಲಿ": ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತೆ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಿದ್ದಾನೆ. ಎಬಿಪಿ ನ್ಯೂಸ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಆತ ಸಲ್ಮಾನ್ ಖಾನ್‌ನನ್ನು ಕೊಲ್ಲುವುದು ನನ್ನ ಜೀವನದ ಗುರಿ ಎಂದು ಹೇಳಿದ್ದಾನಲ್ಲದೆ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಬಿಷ್ಣೋಯಿ ಸಮುದಾಯಕ್ಕೆ ನಟ ಕ್ಷಮೆಕೋರಿದ ನಂತರವೇ ಈ ವಿಚಾರ ಅಂತ್ಯಗೊಳ್ಳಲಿದೆ ಎಂದಿದ್ದಾನೆ.
"ಸಲ್ಮಾನ್ ಖಾನ್ ಕ್ಷಮೆಕೋರಬೇಕು. ಅವರು ಬಿಕಾನೇರ್ ದೇವಸ್ಥಾನಕ್ಕೆ ತೆರಳಿ ಕ್ಷಮೆಕೋರಬೇಕು. ನನ್ನ ಜೀವನದ ಗುರಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿದೆ. ಅವರ ಭದ್ರತೆಯನ್ನು ತೆಗೆದುಹಾಕಿದರೆ ನಾನು ಸಲ್ಮಾನ್ ಅವರನ್ನು ಕೊಲ್ಲುತ್ತೇನೆ," ಎಂದು ಬಿಷ್ಣೋಯಿ ಹೇಳಿದ್ದಾನೆ.
"ಸಲ್ಮಾನ್ ಕ್ಷಮೆಕೋರಿದರೆ ವಿಚಾರ ಇತ್ಯರ್ಥವಾಗಲಿದೆ, ಸಲ್ಮಾನ್ ಅಹಂಕಾರಿ, ಮೂಸೆವಾಲ ಕೂಡ ಹಾಗೆಯೇ ಇದ್ದ. ಸಲ್ಮಾನ್ ಅವರ ಅಹಂ ರಾವಣನ ಅಹಂಗಿಂತಲೂ ದೊಡ್ಡದು," ಎಂದು ಆತ ಹೇಳಿದ್ದಾನೆಂದು ವರದಿಯಾಗಿದೆ.
"ನಮ್ಮ ಬಿಷ್ಣೋಯಿ ಸಮುದಾಯದಲ್ಲಿ ಸಲ್ಮಾನ್ ವಿರುದ್ಧ ಆಕ್ರೋಶವಿದೆ. ಅವರು ನಮ್ಮ ಸಮಾಜವನ್ನು ಅವಮಾನಿಸಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಿಸಲಾಯಿತಾದರೂ ಅವರು ಕ್ಷಮೆಯಾಚಿಸಲಿಲ್ಲ. ಅವರು ಕ್ಷಮೆ ಕೋರದೇ ಇದ್ದರೆ ಅದರ ಪರಿಣಾಮ ಎದುರಿಸಲು ಸಿದ್ಧರಾಗಬೇಕು," ಎಂದು ಆತ ಹೇಳಿದ್ದಾನೆ.
ಕೃಷ್ಣ ಮಗೃ ಹತ್ಯೆ ಸಂಬಂಧ 2018 ರಲ್ಲಿ ಬಿಷ್ಣೋಯಿ ಸಹಚರನೊಬ್ಬನನ್ನು ಸಲ್ಮಾನ್‌ಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.
ಇದನ್ನೂ ಓದಿ: BBC ಸಾಕ್ಷ್ಯಚಿತ್ರ ಪ್ರದರ್ಶನ ಯತ್ನ: ಇಬ್ಬರು ವಿದ್ಯಾರ್ಥಿಗಳನ್ನು ಒಂದು ವರ್ಷ ಅಮಾನತುಗೊಳಿಸಿದ ದಿಲ್ಲಿ ವಿವಿ