ಮಾ.27ರಂದು ಕಟ್ಟಡ ಕಾರ್ಮಿಕರ ಮಂಡಳಿಗೆ ಸಿಐಟಿಯು ಮುತ್ತಿಗೆ

ಕುಂದಾಪುರ, ಮಾ.18: ಜಿಲ್ಲೆಯ ಅಳಿಯ ಸಂತಾನಕಟ್ಟು ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ನಿರಾಕರಿಸುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹೊಸ ನಿಯಮಾವಳಿ ವಿರುದ್ಧ ಜಿಲ್ಲೆಯ ನೋಂದಾಯಿತ ಸಾವಿರಾರು ಕಟ್ಟಡ ಕಾರ್ಮಿಕರು ಮಾ.27ರಂದು ಬೆಂಗಳೂರಿನಲ್ಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ತಿಳಿಸಿದೆ.
ಧರಣಿಯಲ್ಲಿ ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಕಾರ್ಯ ಕರ್ತರು ವಿವಿಧ ಘಟಕಗಳಿಂದ ಭಾಗವಹಿಸಲಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಮಾ.13ರಂದು ಸಾವಿರಾರು ನೈಜ ಫಲಾನುಭವಿಗಳು ಆಗ್ರಹಿಸಿ ಧರಣಿ ನಡೆಸಿ ಮನವಿ ನೀಡಿದ್ದರು. ಆದರೆ ಮನವಿ ಪುರಸ್ಕರಿಸಿ ನ್ಯಾಯ ನೀಡುವ ಭರವಸೆ ಇಲ್ಲವಾಗಿರುವ ಸಾಧ್ಯತೆಗಳು ದಟ್ಟವಾಗಿದೆ ಸರಕಾರ ಅಥವಾ ಕಾರ್ಮಿಕ ಮಂತ್ರಿಗಳು ಕಾರ್ಮಿಕ ವಿರೋಧಿ ನಡೆ ಅನುಸರಿಸುತ್ತಿ ರುವುದರಿಂದ ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲದ ಬಿಜೆಪಿ ಸರಕಾರದ ವಿರುದ್ಧ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿ ನಡೆಸುವುದು ಅನಿವಾರ್ಯವಾಗಿದೆ ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಅಧ್ಯಕ್ಷ ಸುರೇಶ್ ಕಲ್ಲಾಗರ, ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.