ಸಮಾಜದಲ್ಲಿ ಸಾಮರಸ್ಯ ಕೆಡಿಸುವವರ ಬಗ್ಗೆ ಎಚ್ಚರ ಅಗತ್ಯ: ಡಾ.ಚಿನ್ನಪ್ಪ ಗೌಡ
ಉಳ್ಳಾಲ ತಾಲೂಕು ಸಾಹಿತ್ಯ ಸಮ್ಮೇಳನ ಸಮಾರೋಪ

ಮಂಗಳೂರು: ವ್ಯಕ್ತಿಗೆ ಗೌರವ ನೀಡುವುದು ಬಹುತ್ವವನ್ನು ಗೌರವಿಸುವುದು ಸಾಹಿತ್ಯದ ಹೊಣೆಗಾರಿಕೆ.ಜೊತೆಗೆ ಸಾಮರಸ್ಯವನ್ನು ಕೆಡಿಸುವವರ ಬಗ್ಗೆ ಎಚ್ಚರಿವಿರಬೇಕು ಎಂದು ಹಾವೇರಿ ಜಾನಪದ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ ತಿಳಿಸಿದ್ದಾರೆ.
ಅವರು ಶುಕ್ರವಾರ ಮಂಗಳೂರು ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಎಚ್ಚರಿಸಿದರು.
ಒಂದು ಸಮಾಜ ವನ್ನು ಸಂಶಯದಿಂದ ನೋಡುವುದು ರೋಗ ಗ್ರಸ್ತ ಸಮಾಜದ ಪ್ರತೀಕ. ಸಾಹಿತ್ಯಕ್ಕೆ ಯಾವುದೇ ಜಾತಿ ಇಲ್ಲ, ಧರ್ಮ ಇಲ್ಲ ಎನ್ನುವುದು ಸರಿಯಲ್ಲ. ಸಾಹಿತ್ಯ ಸಮಾಜದ ಎಲ್ಲಾ ಜಾತಿ, ಧರ್ಮ, ಜನಾಂಗ ಗಳನ್ನು ಒಳಗೊಂಡು ಬಹುತ್ವವನ್ನು ಪ್ರತಿನಿಧಿಸುವಂತಿರಬೇಕು. ನಮ್ಮ ಸಮಾಜ ದಲ್ಲಿ ಇನ್ನೂ ಸಾಮರಸ್ಯ ಉಳಿದಿದೆ. ಅದರಲ್ಲೂ ಉಳ್ಳಾಲದಲ್ಲಿ ಸಾಮರಸ್ಯ ಇದೆ ಎನ್ನುವುದಕ್ಕೆ ನಮ್ಮ ಮುಂದೆ ಸಾಕಷ್ಟು ನಿದರ್ಶನಗಳಿವೆ.ಇಲ್ಲಿ ಸಾಮರಸ್ಯ ಇಲ್ಲ ಎನ್ನುವ ಮೂಲಕ ನಮ್ಮ ನಡುವೆ ಕಲ್ಪಿತ ಶತ್ರುಗಳನ್ನು ಸೃಷ್ಟಿ ಸಲಾಗುತ್ತಿದೆ. ಜಾತಿ,ಧರ್ಮ ಗಳ ವಿರುದ್ಧ ಜನರನ್ನು ಎತ್ತಿ ಕಟ್ಟುವುದು ಕೆಟ್ಟ ರಾಜಕಾರಣದ ಫಲ. ಮನುಷ್ಯ ಸಂಬಂಧಗಳು ಛಿದ್ರ ಗೊಂಡಾಗ ಹುಟ್ಟಿ ಕೊಳ್ಳುವ ಸಾಹಿತ್ಯ ಅದರ ಪರಿಣಾಮದ ಬಗ್ಗೆ ಸಮಾಜಕ್ಕೆ ಸಂದೇಶ ನೀಡುತ್ತದೆ. ಅಂತಿಮವಾಗಿ ನಮ್ಮ ನಡುವಿನ ಸಾಮರಸ್ಯವನ್ನು, ಬಹುತ್ವದ ನೆಲೆಗಟ್ಟಿನಲ್ಲಿ ಉಳಿಸಿ ಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಉಳ್ಳಾಲ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಾರಣ ರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವು ದಾಗಿ ಚಿನ್ನಪ್ಪ ಗೌಡ ತಿಳಿಸಿದ್ದಾರೆ.
ಉಳ್ಳಾಲ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶ್ಯಾಮಾಲಾ ಮಾಧವ್ ಸಮ್ಮೇಳನ ದ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತಾ ಸಾಹಿತ್ಯದಿಂದ ನಮ್ಮ ಮನಸ್ಸು ಅರಳಬೇಕು. ನಮ್ಮ ಅರಿವಿನ ಸೀಮೆ ನಿರಂತರವಾಗಿ ವಿಸ್ತರಿಸುತ್ತಾ ಹೋಗಬೇಕು. ಸಾಹಿತ್ಯ ಸಾಮರಸ್ಯದ ದೀವಿಗೆಯಾಗಬೇಕು. ನಮ್ಮ ನಾಡು ಎಂದಿಗೂ ಸೌಹಾರ್ದ ಸಾಮರಸ್ಯವನ್ನು ಕಳೆದುಕೊಳ್ಳದಿರಲಿ. ಮಾನವೀಯತೆ ತನ್ನು ಮೀರಿದ ಧರ್ಮ ಬೇರೆ ಇಲ್ಲ. ಇದನ್ನಷ್ಟೇ ನಾವು ನಮ್ಮ ಎಳೆಯರಿಗೆ ಕಲಿಸೋಣ ಎಂದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಒಂಬತ್ತು ಮಹನೀಯರಿಗೆ ಸನ್ಮಾನ ನಡೆಯಿತು.
ಸನ್ಮಾನಿತರಾದವರಲ್ಲಿ ಉದ್ಯಮ ಮತ್ತು ಗಡಿನಾಡ ಕನ್ನಡಿಗ ಕ್ಷೇತ್ರದಲ್ಲಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಸಾಹಿತ್ಯದಲ್ಲಿ ಇರಾ ನೇಮು ಪೂಜಾರಿ, ಸಮಾಜ ಸೇವೆಯಲ್ಲಿ ಇಬ್ರಾಹಿಂ ಕೋಡಿಜಾಲು, ಶಿಕ್ಷಣ ಕ್ಷೇತ್ರದಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಶೋಧನೆಯಲ್ಲಿ ಡಾ. ಸಾಯಿಗೀತಾ, ಲಲಿತಕಲೆಯಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ, ಯಕ್ಷಗಾನದಲ್ಲಿ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ, ಸೋಮೇಶ್ವರ ಉಚ್ಚಿಲ, ಮಾಧ್ಯಮ ಕ್ಷೇತ್ರದಲ್ಲಿ ಪುಷ್ಪರಾಜ್ ಬಿ ಎನ್ ಮತ್ತು ಭೂತಾರಾಧನೆಗಾಗಿ ಮಾಯಿಲ ಕುತ್ತಾರ್ ಇವರುಗಳನ್ನು ಸನ್ಮಾನಿಸಲಾಯಿತು.
ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾಗಿರುವ ಟಿ ಜಿ ರಾಜಾರಾಂ ಭಟ್ ಅವರು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿರುವ ಪ್ರೊ. ಕಿಶೋರ್ ಕುಮಾರ್ ಸಿ ಕೆ ಮತ್ತು ಕಾರ್ಪೋರೇಟ್ ಅಫ್ಫೇರ್ಸ್ ಇನ್ಫೋಸಿಸ್ ಲಿ. ಬೆಂಗಳೂರು ಇದರ ಮುಖ್ಯಸ್ಥರಾಗಿರುವ ಸಂತೋಷ್ ಅನಂತಪುರ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀ ನಾಥ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ ಅವರ ನಾಟ್ಯನಿಕೇತನ ಕೊಲ್ಯ ಮಂಗಳೂರು, ವಿದುಷಿ ರೇಷ್ಮಾ ನಿರ್ಮಲ್ ಭಟ್ ಅವರ ನೃತ್ಯ ಲಹರಿ ನಾಟ್ಯಾಲಯ (ರಿ) ಫಜೀರು, ಕುಸುಮ ಪ್ರಶಾಂತ ಉಡುಪ ಮತ್ತು ಬಳಗ, ಮಂಜುಳಾ ಜಿ ರಾವ್ ಇರಾ ಇವರ ಕೊಳಲು ಸಂಗೀತ ವಿದ್ಯಾಲಯ, ಇರಾ , ದೇರಳಕಟ್ಟೆಯ ದಕಜಿಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ತ್ಯಾಗಂ ಹರೇಕಳ ಕಾರ್ಯ ಕ್ರಮ ನಿರೂಪಿಸಿದರು. ವಿಜಯಲಕ್ಷ್ಮಿ ಕಲ್ಲಿಮಾರ್ ವಂದಿಸಿದರು.