ತೀರ್ಪುಗಾರನನ್ನು ಗೌರವಿಸುವ ಗುಣ ಆಟಗಾರರಲ್ಲಿ ಇರಬೇಕು: ಭಾರತ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮನಿ
'ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್-2023'

ಕೊಣಾಜೆ: ಕ್ರೀಡೆಯಲ್ಲಿ ಯಾವುದೇ ತೀರ್ಪು ನೀಡಿದರೂ ತೀರ್ಪುಗಾರನನ್ನು ಗೌರವಿಸುವ ಗುಣ ಆಟಗಾರರಲ್ಲಿ ಮುಖ್ಯವಾಗಿ ಇರಬೇಕು ಎಂದು ಭಾರತ ತಂಡದ ಮಾಜಿ ಆಟಗಾರ, ಪದ್ಮಶ್ರೀ ಡಾ.ಸಯ್ಯದ್ ಮುಸ್ತಫಾ ಹುಸೈನ್ ಕಿರ್ಮನಿ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಆಶ್ರಯದಲ್ಲಿ ಅಂತರ್ ಫಿಸಿಯೋಥೆರಪಿ ಕಾಲೇಜುಗಳ ದಕ್ಷಿಣ ಭಾರತ ಮಟ್ಟದ ಕ್ರಿಕೆಟ್ ಪಂದ್ಯಾಟ 'ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್-2023' ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಜಯ ಗಳಿಸಲು ತಂಡದ ಪ್ರಯತ್ನ, ಶಿಸ್ತು, ಪ್ರಾಮಾಣಿಕ ಪರಿಶ್ರಮ ಅಗತ್ಯ. ನಮ್ಮ ಕಾಲದಲ್ಲಿ ಫಿಸಿಯೋಥೆರಪಿ ಅಥವಾ ಜಿಮ್ ಇರಲಿಲ್ಲ. ವೈದ್ಯರೂ ಇರಲಿಲ್ಲ, ದೊಡ್ಡ ದೊಡ್ಡ ದೇಹದಾರ್ಢ್ಯ ಪಟುಗಳು ಬಂದು ಮಸಾಜ್ ಮಾಡುತ್ತಿದ್ದರು. ಇಂಥ ಸಂದರ್ಭದಲ್ಲೂ ಭಾರತ ತಂಡ ವಿಶ್ವಕಪ್ ಗೆದ್ದುಕೊಂಡಿದ್ದು ಅದೊಂದು ಅದ್ಭುತ ದಿನಗಳಾಗಿವೆ ಎಂದು ತಿಳಿಸಿದರು.
ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಎಂ.ಶಾಂತರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಫಿಸಿಯೋಥೆರಪಿ ವಿದ್ಯಾರ್ಥಿಗಳು ಕೇವಲ ವೈದ್ಯರು ಮಾತ್ರವಲ್ಲ, ಸಮಾಜದ ಆಸ್ತಿಯಾಗಿದ್ದಾರೆ. ಉತ್ತಮ ಕ್ರೀಡಾಪಟುವಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ವಿಕೆಟ್ ಕೀಪರ್ ವಿಫಲನಾದರೆ ಪಂದ್ಯವೇ ಕೈತಪ್ಪುತ್ತದೆ. ಭಾರತ ತಂಡದ ಪ್ರಥಮ ವಿಶ್ವಕಪ್ ಗೆಲುವಿನಲ್ಲಿ ಸಯ್ಯದ್ ಕಿರ್ಮನಿ ಪಾತ್ರ ಮಹತ್ತರವಾಗಿತ್ತು ಎಂದರು.
ರಾಜ್ಯ ಫಿಸಿಯೋಥೆರಪಿ ಅಸೋಸಿಯೇಷನ್ ಅಧ್ಯಕ್ಷ ಡಾ.ಇಫ್ತಿಕಾರ್ ಅಲಿ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ ಮುಖ್ಯ ಅತಿಥಿಗಳಾಗಿದ್ದರು.
ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಚಾರ್ಯ ಪ್ರೊ.ಧಾನೇಶ್ ಕುಮಾರ್ ಕೆ.ಯು. ಸ್ವಾಗತಿಸಿದರು. ಸಂ.ಕಾ. ಪ್ರೊ.ಜಯೇಶ್ ಚಂದ್ರನ್ ವಂದಿಸಿದರು. ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.