ಬೆಂಗಳೂರು: ವಿಮಾನ ಶೌಚಾಲಯದಲ್ಲಿ ಧೂಮಪಾನ; ಪ್ರಯಾಣಿಕ ಬಂಧನ
ಬೆಂಗಳೂರು: ಕೊಲ್ಕತ್ತಾದಿಂದ ಬೆಂಗಳೂರಿಗೆ ಶುಕ್ರವಾರ ಬರುತ್ತಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದಲ್ಲಿ 20 ವರ್ಷ ವಯಸ್ಸಿನ ಪ್ರಯಾಣಿಕನನ್ನು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಕಳೆದ 15 ದಿನಗಳಲ್ಲಿ ಇದೇ ಮಾರ್ಗದ ವಿಮಾನ ಪ್ರಯಾಣಿಕ ಇದೇ ಕಾರಣಕ್ಕೆ ಬಂಧಿತನಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ.
ಮಾರ್ಚ್ 17ರಂದು ಮುಂಜಾನೆ 1.45ಕ್ಕೆ 6ಇ 716 ವಿಮಾನದಲ್ಲಿ ಈ ಘಟನೆ ನಡೆದಿದೆ. ಅಸ್ಸಾಂ ಮೂಲದ ಸೆಹೇರಿ ಚೌಧರಿ ಎಂಬಾತ ಶೌಚಾಲಯದ ಒಳಗೆ ಸಿಗರೇಟ್ ಹೊತ್ತಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
"ಪ್ರಯಾಣಿಕರಿಗೆ ಸಿಗರೇಟ್ ವಾಸನೆ ಬಂದಿದ್ದು, ಶೌಚಾಲಯದಿಂದ ಹೊಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಸಹ ಪ್ರಯಾಣಿಕರು ಸಿಬ್ಬಂದಿಗೆ ಮಾಹಿತಿ ನೀಡಿದರು. ವಿಮಾನ ಬೆಂಗಳೂರಿನಲ್ಲಿ ಇಳಿದ ಬಳಿಕ ವಿಮಾನದ ಕ್ಯಾಪ್ಟನ್, ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ" ಎಂದು ಪೊಲೀಸರು ವಿವರಿಸಿದ್ದಾರೆ.
ಈತ ಬೆಂಗಳೂರಿನ ಮಾಲ್ ಒಂದರಲ್ಲಿ ಸೇಲ್ಸ್‌ಮನ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಉದ್ಯೋಗ ತೊರೆದು ಹುಟ್ಟೂರಿಗೆ ವಾಪಸ್ಸಾಗಿದ್ದ. ಉದ್ಯೋಗ ಅರಸಿ ಮತ್ತೆ ಬೆಂಗಳೂರಿಗೆ ಆಗಮಿಸಿದ್ದ. ಚೌಧರಿ ವಿರುದ್ಧ ಐಪಿಸಿ ಸೆಕ್ಷನ್ 336 ಹಾಗೂ ನಾಗರಿಕ ವಿಮಾನಯಾನ ಕಾಯ್ದೆ-1982ರ ಸೆಕ್ಷನ್ 3(1)(ಸಿ) ಅನ್ವಯ ಪ್ರಕರಣ ದಾಖಲಿಸಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಗಿದೆ.
ಮಾರ್ಚ್ 5ರಂದು 6ಇ 716 ವಿಮಾನದಲ್ಲಿ ಮಹಿಳೆಯೊಬ್ಬರನ್ನು ಇದೇ ಆರೋಪದಲ್ಲಿ ಬಂದಿಸಲಾಗಿತ್ತು.