ಇಂಡಿಯನ್ ವೆಲ್ಸ್ ಚಾಂಪಿಯನ್ ಪಟ್ಟಕ್ಕೇರಿದ ಹಿರಿಯ ಆಟಗಾರ ರೋಹನ್ ಬೋಪಣ್ಣ
ಇಂಡಿಯನ್ ವೆಲ್ಸ್: BNP ಪರಿಬಾಸ್ ಟೆನಿಸ್ ಓಪನ್‌ನಲ್ಲಿ ಆಸ್ಟ್ರೇಲಿಯದ ಜೊತೆಗಾರ ಮ್ಯಾಟ್ ಎಬ್ಡೆನ್ ರೊಂದಿಗೆ ಪುರುಷರ ಡಬಲ್ಸ್ ಕಿರೀಟವನ್ನು ಗೆಲ್ಲುವ ಮೂಲಕ ಭಾರತದ ರೋಹನ್ ಬೋಪಣ್ಣ ಅವರು ಈ ಸಾಧನೆ ಮಾಡಿದ ಹಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
43ರ ಹರೆಯದ ಬೋಪಣ್ಣ ಹಾಗೂ 35ರ ಹರೆಯದ ಎಬ್ಡೆನ್ ಅವರು ಶನಿವಾರ ನಡೆದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್‌ನ ವೆಸ್ಲಿ ಕೂಲ್‌ಹೋಫ್ ಹಾಗೂ ಬ್ರಿಟನ್‌ನ ನೀಲ್ ಸ್ಕುಪ್ಸ್ಕಿ ಅವರನ್ನು 6-3, 2-6, 10-8 ಸೆಟ್‌ಗಳಿಂದ ಸೋಲಿಸಿದರು. ಇದರೊಂದಿಗೆ ATP ಮಾಸ್ಟರ್ಸ್ 1000 ಚಾಂಪಿಯನ್ ಎನಿಸಿಕೊಂಡರು
"ಇದು ನಿಜವಾಗಿಯೂ ವಿಶೇಷವಾಗಿದೆ. ಇದನ್ನು ಟೆನಿಸ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ" ಎಂದು ತಮ್ಮ 10 ನೇ ಎಟಿಪಿ ಮಾಸ್ಟರ್ಸ್ 1000 ಫೈನಲ್‌ನಲ್ಲಿ ಆಡಿರುವ ಬೋಪಣ್ಣ ಹೇಳಿದರು.
ಬೋಪಣ್ಣ ಈ ಪ್ರಶಸ್ತಿ ಗೆಲ್ಲುವ ಮೂಲಕ ಕೆನಡಾದ ಡೇನಿಯಲ್ ನೆಸ್ಟರ್ ಅವರನ್ನು ಹಿಂದಿಕ್ಕಿದರು, ನೆಸ್ಟರ್ ಅವರು 2015 ರ ಸಿನ್ಸಿನಾಟಿ ಮಾಸ್ಟರ್ಸ್ ಅನ್ನು ತಮ್ಮ 42 ನೇ ವಯಸ್ಸಿನಲ್ಲಿ ಗೆದ್ದಿರುವ ಹಿರಿಯ ಚಾಂಪಿಯನ್ ಆಗಿದ್ದರು.
ಕನ್ನಡಿಗ ಬೋಪಣ್ಣ ಪಾಲಿಗೆ ಇದು ಐದನೇ ಮಾಸ್ಟರ್ಸ್ 1000 ಡಬಲ್ಸ್ ಪ್ರಶಸ್ತಿಯಾಗಿದೆ 2017 ರಲ್ಲಿ ಮಾಂಟೆ ಕಾರ್ಲೋದಲ್ಲಿ ಗೆದ್ದ ನಂತರ ಇದು ಮೊದಲನೆ ಪ್ರಶಸ್ತಿಯಾಗಿದೆ.
ಇದು ಇಂಡೋ-ಆಸ್ಟ್ರೇಲಿಯನ್ ಜೋಡಿಗೆ ವರ್ಷದ ಮೂರನೇ ಫೈನಲ್ ಆಗಿತ್ತು. ಬೋಪಣ್ಣ ಅವರು ಈಗ 24 ಟೂರ್ ಲೆವೆಲ್ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.